ಆಸ್ಪತ್ರೆಯೊಂದರ ಛಾವಣಿ ಮೇಲೆ 500ಕ್ಕೂ ಹೆಚ್ಚು ಕೊಳೆತ ಮೃತದೇಹಗಳು ಮೃತದೇಹಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದಲ್ಲಿ ಅತ್ಯಂತ ಕೆಟ್ಟ ಹಾಗೂ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಕೊಳೆತ ಸ್ಥಿತಿಯಲ್ಲಿ 500ಕ್ಕೂ ಹೆಚ್ಚು ಮೃತದೇಹ ಪತ್ತೆಯಾಗಿವೆ. ಈ ಕುರಿತು ನಿಶ್ತಾರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಸೆಕ್ಷನ್ ಅಧಿಕಾರಿಯೊಬ್ಬರು ಪತ್ರ ಬರೆದಿದ್ದಾರೆ.

ಶುಕ್ರವಾರ (ಅಕ್ಟೋಬರ್ 14, 2022), ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಾರ್ವಜನಿಕ ವಲಯದ ಆಸ್ಪತ್ರೆಯಾದ ಅಯಾನಿ ನಿಶ್ತಾರ್ ಆಸ್ಪತ್ರೆಯ ಛಾವಣಿಯ ಮೇಲೆ ಕೊಳೆತ ಶವಗಳನ್ನು ಅಧಿಕಾರಿಗಳು ಪತ್ತೆ ಮಾಡಿದರು. ಬೆಳಕಿಗೆ ಬಂದ ಮೃತ ದೇಹಗಳ ಹಲವು ಭಾಗಗಳೂ ನಾಪತ್ತೆಯಾಗಿದ್ದವು. ಬಹುತೇಕ ಮೃತ ದೇಹಗಳು ಛಿದ್ರಗೊಂಡಿದ್ದರೆ, ಕೆಲವು ಮೃತ ದೇಹಗಳಿಂದ ಭಾಗಗಳು ಹೊರಬಂದಿವೆ. ಮೃತ ದೇಹದಿಂದ ಹೃದಯ ಮತ್ತು ಇತರ ಅಂಗಗಳು ಹೊರಬಂದು ಕೊಳೆತಿರುವುದು ಕಂಡುಬಂದಿದೆ. ಘಟನೆಯ ಬಗ್ಗೆ ಪಾಕಿಸ್ತಾನ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಘಟನೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇವು ಯಾರ ದೇಹಗಳು? ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಇಷ್ಟೊಂದು ಪ್ರಮಾಣದ ಮೃತ ದೇಹಗಳು ಎಲ್ಲಿಂದ ಬಂದವು? ಹೀಗೆ ಹಲವು ಅನುಮಾನಗಳ ಹಾದಿಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಮೃತ ದೇಹಗಳಿಂದ ಅಕ್ರಮವಾಗಿ ಅಂಗಾಂಗಗಳನ್ನು ಸ್ಥಳಾಂತರಿಸಿರುವ ಶಂಕೆ ವ್ಯಕ್ತವಾಗುತ್ತಿರುವಾಗಲೇ, ವೈದ್ಯಕೀಯ ಪರೀಕ್ಷೆಗೆ ಮೃತದೇಹಗಳ ಅಂಗಾಂಗಗಳನ್ನು ಬೇರ್ಪಡಿಸಲಾಗಿದೆಯೇ ಎಂಬ ಗುಮಾನಿ ಎದ್ದಿದೆ.  ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಪತ್ತೆಯಾಗಿರುವ ಈ ಶವಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ಭಯಭೀತರಾಗಿದ್ದಾರೆ.

ಈ ಆತಂಕಕಾರಿ ಘಟನೆಗೆ ಪಂಜಾಬ್ ಸಿಎಂ ಪರ್ವೇಜ್ ಇಲಾಹಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಚಾರಣೆಯನ್ನು ಪೂರ್ಣಗೊಳಿಸಲು ವಿಶೇಷ ಆರೋಗ್ಯ ಕಾರ್ಯದರ್ಶಿ ಮುಜಾಮಿಲ್ ಬಶೀರ್ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಆದಷ್ಟು ಬೇಗ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ. ಹಾಗೆಯೇ ಮೃತ ದೇಹಗಳ ಮೇಲೆ ದೊಡ್ಡ ಗಾತ್ರದ ಬಟ್ಟೆ ಇರುವುದರಿಂದ, ಮೃತರು ಬಲೂಚ್ ಸಮುದಾಯಕ್ಕೆ ಸೇರಿದವರು ಎಂದು ಶಂಕಿಸಲಾಗಿದೆ. ಆದರೆ ಸ್ಪಷ್ಟ ಮಾಹಿತಿಗಾಗಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!