ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್‌ವಾಲಿ ತರಬೇತಿ ವಾಯುನೆಲೆ ಮೇಲೆ ಇಂದು ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದಾರೆ.
ದಾಳಿಕೋರರು ವಾಯುಪಡೆ ನೆಲೆ ಪ್ರವೇಶಿಸುವ ಮುನ್ನವೇ ಪಾಕ್ ಸೇನೆಯು ಮೂವರು ಭಯೋತ್ಪಾದಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ವಾಯು ಪಡೆ (PAF) ತಿಳಿಸಿದೆ.
ಭಾರೀ ಶಸ್ತ್ರಸಜ್ಜಿತ ಐದರಿಂದ ಆರು ವ್ಯಕ್ತಿಗಳ ಗುಂಪು ಇಂದು ಮುಂಜಾನೆ ದಾಳಿ ನಡೆಸಿದ್ದು, ಇದರಿಂದ ಎರಡೂ ಕಡೆಯಿಂದಲೂ ಗುಂಡಿನ ಚಕಮಕಿ ನಡೆಯಿತು. ಅದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ ಮೂವರು ಭಯೋತ್ಪಾದಕರು ಹತ್ಯೆಗೀಡಾಗಿದ್ದು, ದಾಳಿ ವಿಫಲಗೊಳಿಸಲಾಗಿದೆ ಎಂದು ಪಿಎಎಫ್ ಹೇಳಿದೆ.
ಈ ದಾಳಿಯಿಂದ ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ಮೂರು ಯುದ್ಧ ವಿಮಾನಗಳು ಹಾನಿಯಾಗಿವೆ. ಪಾಕಿಸ್ತಾನ ಮೂಲದ ಭಯೋತ್ಪಾದನಾ ಗುಂಪು ತೆಹ್ರೀಕ್ ಇ ಜಿಹಾದ್ ಪಾಕಿಸ್ತಾನ್ (ಟಿಜೆಪಿ) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಮತ್ತೊಂದೆಡೆ ದಾಳಿಯ ಕುರಿತಾದ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.