ʼವಿಶ್ವಾಸʼ ಸಾಬೀತುಪಡಿಸುವಲ್ಲಿ ವಿಫಲ; ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪದಚ್ಯುತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಪಾತ್ರ ಮುಗಿದಿದೆ. ಮಧ್ಯರಾತ್ರಿಯವರೆಗೂ ನಡೆದ ರಾಜಕೀಯ ಹೈಡ್ರಾಮಾ ನಡುವೆಯೇ ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಅವಿಶ್ವಾಸ ನಿರ್ಣಯ ಮಂಡಿಸಿ ಇಮ್ರಾನ್ ಸರ್ಕಾರವನ್ನು ಕೆಳಗಿಳಿಸಿದ್ದಾರೆ.
ತಡರಾತ್ರಿವರೆಗೆ ಇಮ್ರಾನ್‌ ಖಾನ್‌ ತಮ್ಮ ನಿವಾಸದಲ್ಲಿ ಕ್ಯಾಬಿನೆಟ್‌ ಮೀಟಿಂಗ್‌ ನಡೆಸಿದ್ರು. ಈ ನಡುವೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಐಎಸ್‌ಐ ಮುಖ್ಯಸ್ಥರು ಕೂಡ ಇಮ್ರಾನ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಮತ ಹಾಕಲಾಯಿತು.
342 ಸದಸ್ಯರ ಪೈಕಿ ಅಸೆಂಬ್ಲಿಯಲ್ಲಿ 174 ಮಂದಿ ಇಮ್ರಾನ್ ಸರ್ಕಾರದ ವಿರುದ್ಧ, ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿ ಇಮ್ರಾನ್‌ ಖಾನ್‌ ಸರ್ಕಾರವನ್ನು ಕೆಳಗಿಳಿಸಿದರು. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯವನ್ನು ಕೊನೆಯವರೆಗೂ ತಡೆಯಲು ಆಡಳಿತ ಪಕ್ಷದ ಸದಸ್ಯರು ರಣತಂತ್ರ ಹೆಣೆದರೂ ಅಂತಿಮವಾಗಿ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಮಧ್ಯರಾತ್ರಿ 12.30ಕ್ಕೆ ನಡೆಯಿತು. ಮತದಾನಕ್ಕೂ ಮುನ್ನವೇ ಸ್ಪೀಕರ್ ಮತ್ತು ಉಪಸಭಾಪತಿ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದರು. ಪ್ರತಿಪಕ್ಷದ ಪಿಎಂಎಲ್-ಎನ್ ನಾಯಕ ಅಯಾಜ್ ಸಾದಿಕ್ ಸ್ಪೀಕರ್ ಆಗಿ ಪದಾರ್ಪಣೆ ಮಾಡಿದರು. ಇದೀಗ ಪಾಕ್‌ನ ಮುಂದಿನ ನಾಯಕ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಯಕ ಶೆಹಬಾಜ್ ಷರೀಫ್ (ನವಾಜ್ ಷರೀಫ್ ಅವರ ಸಹೋದರ)ಪ್ರಧಾನಿಯಾಗುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!