ಕೋವಿಡ್‌ ನಂತರ ಭಾರತದ ಆರ್ಥಿಕತೆಯಲ್ಲಿ ಚೇತರಿಕೆ: ಪ್ರಸಕ್ತ ಹಣಕಾಸು ವರ್ಷದಲ್ಲಿ 23 ಶೇಕಡಾದಷ್ಟು ಏರಿಕೆಯಾಗಿದೆ ನೇರ ತೆರಿಗೆ ಸಂಗ್ರಹಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಸಾಂಕ್ರಾಮಿಕ ಮಹಾಮಾರಿ ಕೋವಿಡ್‌ ನಂತರ ಭಾರತದ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು ಇದರ ಸೂಚನೆಯೆಂಬಂತೆ ಭಾರತದ ನೇರ ತೆರಿಗೆ ಸಂಗ್ರಹಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ದೃಢವಾದ ವೇಗದಲ್ಲಿ ಬೆಳೆಯುತ್ತಿವೆ. 2022-23 ನೇ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ನೇರ ತೆರಿಗೆ ಸಂಗ್ರಹವು ವರ್ಷದಿಂದ ವರ್ಷಕ್ಕೆ 23 ಶೇಕಡಾ ಏರಿಕೆಯಾಗಿದ್ದು ಸಂಗ್ರಹ ಮೊತ್ತವು 7 ಲಕ್ಷ ಕೋಟಿಗೆ ಜಿಗಿದಿದೆ.

ನೇರ ತೆರಿಗೆ ಸಂಗ್ರಹದ ಅಂಕಿಅಂಶಗಳು ಆರ್ಥಿಕ ಚಟುವಟಿಕೆಯ ಪುನರುಜ್ಜೀವನದ ಸ್ಪಷ್ಟ ಸೂಚಕವಾಗಿದೆ, ಜೊತೆಗೆ ಸರ್ಕಾರದ ಸ್ಥಿರ ನೀತಿಗಳ ಫಲಿತಾಂಶವಾಗಿದೆ, ಪ್ರಕ್ರಿಯೆಗಳ ಸರಳೀಕರಣ ಮತ್ತು ಸುಗಮಗೊಳಿಸುವಿಕೆ ಮತ್ತು ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಮೂಲಕ ತೆರಿಗೆ ಸೋರಿಕೆಯನ್ನು ತಡೆಗಟ್ಟಲಾಗಿದೆ ಎಂಬುದನ್ನು ಇವು ಸೂಚಿಸುತ್ತವೆ ಎಂದು ಹಣಕಾಸು ಸಚಿವಾಲಯ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ 17, 2022 ರಂದು ಹೊರಬಂದಿರುವ 2022-23ನೇ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹಗಳ ಅಂಕಿಅಂಶಗಳ ಪ್ರಕಾರ ನಿವ್ವಳ ಸಂಗ್ರಹವು ರೂ 7,00,669 ಕೋಟಿಗಳಷ್ಟಿದೆ ಎಂದು ತೋರಿಸಿವೆ. ಇದು ಹಿಂದಿನ ಅವಧಿಯಲ್ಲಿ ಸಂಗ್ರಹವಾದ 5,68,147 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇಕಡಾ 23 ರಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ.

ಹೇಳಿಕೆಯ ಪ್ರಕಾರ 7,00,669 ಕೋಟಿ ರೂ. ನಿವ್ವಳ ನೇರ ತೆರಿಗೆ ಸಂಗ್ರಹವು 3,68,484 ಕೋಟಿ ರೂ. ನಿಗಮ ತೆರಿಗೆ ಮತ್ತು 3,30,490 ಕೋಟಿ ರೂ. ಭದ್ರತಾ ವಹಿವಾಟು ತೆರಿಗೆ (ಎಸ್‌ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ)ಗಳನ್ನು ಒಳಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!