ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಗಮನ ಸೆಳೆದ ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದ್ದು, ಹಲವು ರಾಜ್ಯಗಳಲ್ಲಿ ಅಚ್ಚರಿಯ ತಿರುವುಗಳು ಕಂಡುಬಂದಿವೆ.
ಹಲವು ವರ್ಷಗಳಿಂದ ಬಿಗಿಯಾಗಿದ್ದ ರಾಜಕೀಯ ಕೋಟೆಗಳು ಕುಸಿದರೆ, ಹೊಸ ನಾಯಕತ್ವ ಮತ್ತು ಹೊಸ ಸಮೀಕರಣಗಳು ಮತದಾರರ ನಿರ್ಧಾರದಲ್ಲಿ ಸ್ಪಷ್ಟವಾಗಿ ಮೂಡಿಬಂದಿವೆ. ಈ ಫಲಿತಾಂಶಗಳು ಮುಂದಿನ ರಾಷ್ಟ್ರೀಯ ರಾಜಕೀಯದ ಮೇಲೂ ದೊಡ್ಡ ಪ್ರಭಾವ ಬೀರುವ ಸೂಚನೆ ನೀಡಿವೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ದೀರ್ಘಕಾಲ ಆಡಳಿತ ನಡೆಸಿದ್ದ ಟಿಎಂಸಿ ಹಿನ್ನಡೆ ಅನುಭವಿಸಿದ್ದು, ಈ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದಂತಾಗಿದೆ. ಪ್ರಮುಖ ನಾಯಕರ ಸೋಲು-ಗೆಲುವುಗಳು ಬಂಗಾಳದ ರಾಜಕೀಯ ಸಮೀಕರಣವನ್ನೇ ಬದಲಿಸಿವೆ.
ಇದನ್ನೂ ಓದಿ:
ಇನ್ನು, ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಚೊಚ್ಚಲ ಸ್ಪರ್ಧೆಯಲ್ಲೇ ಪ್ರಬಲ ಶಕ್ತಿ ಎಂದು ತೋರಿಸಿಕೊಂಡಿದೆ. ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಸಾಂಪ್ರದಾಯಿಕ ಪೈಪೋಟಿಗೆ ಹೊಸ ಆಯಾಮ ನೀಡಿರುವ ಟಿವಿಕೆ, ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದತ್ತ ಸಾಗಿದರೆ, ಅಸ್ಸಾಂನಲ್ಲಿ ಬಿಜೆಪಿ ಮತ್ತೊಮ್ಮೆ ಜನರ ವಿಶ್ವಾಸ ಗಳಿಸಿದೆ.
ಅಸ್ಸಾಂನಲ್ಲಿ ಬಿಜೆಪಿ ಮತ್ತೊಮ್ಮೆ ಪ್ರಭುತ್ವ ಸಾಧಿಸಿದ್ದು, ಸತತ ಮೂರನೇ ಬಾರಿಗೆ ಜನರ ವಿಶ್ವಾಸ ಗಳಿಸಿದೆ. ಅಭಿವೃದ್ಧಿ ಕಾರ್ಯಗಳು, ಸಂಘಟಿತ ಪ್ರಚಾರ ಮತ್ತು ನಾಯಕತ್ವದ ಮೇಲಿನ ನಂಬಿಕೆ ಪಕ್ಷಕ್ಕೆ ಬಲ ನೀಡಿದಂತೆ ಕಾಣಿಸಿದೆ.
ಇತ್ತ ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಇಟ್ಟಿದ್ದು, ಆಡಳಿತದ ನಿರಂತರತೆಗೆ ಮತದಾರರು ಬೆಂಬಲ ಸೂಚಿಸಿದ್ದಾರೆ. ಒಟ್ಟಾರೆ ಪಂಚರಾಜ್ಯಗಳ ಫಲಿತಾಂಶ ದೇಶದ ರಾಜಕೀಯ ಭವಿಷ್ಯಕ್ಕೆ ಹೊಸ ದಿಕ್ಕು ತೋರಿಸಿದೆ.



