Wednesday, July 6, 2022

Latest Posts

ಪರೀಕ್ಷೆ ಎದುರಿಸುವುದಕ್ಕೆ ಪ್ರಧಾನಿ ಮೋದಿ ಪಾಠಶಾಲೆ- ಇಲ್ಲಿವೆ 7 ಪ್ರಮುಖಾಂಶಗಳು

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪ್ರತಿವರ್ಷದ ಬೋರ್ಡ್ ಪರೀಕ್ಷೆಗಳ ಕ್ಯಾಲೆಂಡರ್ ಆಧರಿಸಿ ನಡೆದುಕೊಂಡು ಬಂದಿರುವ ಜನಪ್ರಿಯ ಕಾರ್ಯಕ್ರಮ ಎಂದರೆ ‘ಪರೀಕ್ಷಾ ಪೆ ಚರ್ಚಾ’. ಕೋವಿಡ್ ಕಾರಣದಿಂದ ಕಳೆದೆರಡು ವರ್ಷ ಆನ್ಲೈನ್ ಗೆ ಸೀಮಿತವಾಗಿದ್ದ ಕಾರ್ಯಕ್ರಮ ಈ ಬಾರಿ ದೆಹಲಿಯ ತಾಲ್ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ತನ್ನ ಎಂದಿನ ಮೆರುಗಲ್ಲಿ ನಡೆಯಿತು. ಕರ್ನಾಟಕವೂ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಲ್ಲಿ ಹಾಜರಿದ್ದರಲ್ಲದೇ, ಆನ್ಲೈನ್ ಮೂಲಕವು ಶಾಲೆಗಳು ಮತ್ತು ವಿದ್ಯಾರ್ಥಿ-ಶಿಕ್ಷಕ ಸಮೂಹ ಬೆಸೆದುಕೊಂಡಿತ್ತು.

ಪರೀಕ್ಷೆಯನ್ನು ಎದುರಿಸುವ ನಿಟ್ಟಿನಲ್ಲಿ ಮಾತು ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗುತ್ತರಿಸುತ್ತ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಹೇಳಿದ ಪ್ರಮುಖಾಂಶಗಳು ಹೀಗಿವೆ.

  • ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಿಬಿಟ್ಟೆವು ಎಂಬ ಕಾರಣಕ್ಕೆ ಉತ್ತಮ ಫಲಿತಾಂಶ ಬರಬೇಕಿಲ್ಲ. ಪ್ರಯತ್ನಕ್ಕೆ ಗರಿಷ್ಟ ಪರಿಣಾಮ ಬರಲೆಂದು ಮಾಡುತ್ತಿರುವ ಕಾರ್ಯವನ್ನು ಆನಂದಿಸುತ್ತ ಕೆಲಸ ಮಾಡಬೇಕು.
  • ನಮ್ಮ ಹೆಣ್ಣುಮಕ್ಕಳ ಮಹಾತ್ವಾಕಾಂಕ್ಷೆಗಳಿಗೆ ಸಾಂಸ್ಥಿಕ ರೂಪವನ್ನು ಒದಗಿಸಬೇಕು. ಅವರು ಹೊರೆಯಲ್ಲ, ಜ್ಞಾನದ ಶ್ರೀಮಂತ ಮೂಲ. ಕೇವಲ ತಮ್ಮ ಬಗ್ಗೆ ಮಾತ್ರವಲ್ಲದೇ, ಸಮಾಜ ಮತ್ತು ದೇಶಕ್ಕಾಗಿ ಧೈರ್ಯ, ಬಲ ಮತ್ತು ತಾಳಿಕೆಯನ್ನು ತೋರಿಸುವವರು ಇವರು.
  • ಸ್ಫೂರ್ತಿಯನ್ನು ಪಡೆಯುವುದಕ್ಕೆ ಯಾವುದೇ ಚುಚ್ಚುಮದ್ದು ಅಥವಾ ಸೂತ್ರಗಳಿಲ್ಲ. ನಮ್ಮನ್ನು ನಾವು ಕಂಡುಕೊಂಡು, ಏನನ್ನು ಮಾಡುವುದರಿಂದ ನಮಗೆ ಸಂತೋಷ ದೊರಕುತ್ತದೆ ಎಂದು ಅರ್ಥಮಾಡಿಕೊಳ್ಳುವುದರಿಂದ ಸ್ಫೂರ್ತಿ ಕಂಡುಕೊಳ್ಳಬಹುದು.
  • ಪರೀಕ್ಷೆ ಬಗ್ಗೆ ಆತಂಕ ಪಟ್ಟುಕೊಳ್ಳುವುದು ನಿಮ್ಮ ಕೆಲಸವಲ್ಲ, ಅದನ್ನು ಪಾಲಕರಿಗೆ ಬಿಟ್ಟುಬಿಡಿ ಅಂತಲೂ ತಮಾಶೆ ಮಾಡಿದರು ಪ್ರಧಾನಿ.
  • ಆನ್ಲೈನ್’ ಶಿಕ್ಷಣದಿಂದ ಅನಗತ್ಯ ವಿಷಯಗಳತ್ತ ಮನಸ್ಸು ಎಳೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, “ಸಮಸ್ಯೆ ಇರೋದು ಆನ್ಲೈನ್ ಅಥವಾ ಆಫ್ ಲೈನ್ ಮಾಧ್ಯಮದಲ್ಲಲ್ಲ. ಬದಲಿಗೆ ಮನಸ್ಸಿನಲ್ಲಿ. ತರಗತಿಗಳಲ್ಲೂ ಪಾಠ ಕೇಳುತ್ತಿರುವಾಗ ನಿಮ್ಮ ಮನಸ್ಸು ಮತ್ತೆಲ್ಲೋ ಹೋಗುತ್ತದಲ್ಲವೇ? ಈ ಹಿಂದೆ ಕಂಠಸ್ಥವಾಗಿಯೇ ಕಲಿಯುವ ಗುರುಕುಲ ಪದ್ಧತಿ ತ್ತು. ಯುಗ ಬದಲಾದಂತೆ ಮಾಧ್ಯಮ ಬದಲಾಗುವುದು ಸಹಜ. ಇದನ್ನೊಂದು ಅವಕಾಶವಾಗಿ ನೋಡಿಕೊಳ್ಳಬೇಕು.”
  • ಮನಸ್ಸನ್ನು ಶಾಂತವಾಗಿ ಇರಿಸಿಕೊಂಡಾಗ ಪರೀಕ್ಷೆಯಲ್ಲಿ ನೀವು ಓದಿದ್ದನ್ನೆಲ್ಲ ನೆನಪಿಸಿಕೊಂಡು ಉತ್ತರಿಸುವುದಕ್ಕೆ ಸಾಧ್ಯವಾಗುತ್ತದೆ. ನೀವು ನೀರಿನ ಪಾತ್ರೆಯಲ್ಲಿ ನಾಣ್ಯಗಳನ್ನು ಹಾಕಿ ನಂತರ ಅದನ್ನು ಅಲ್ಲಾಡಿಸಿದಾಗ, ನಾಣ್ಯ ಎಲ್ಲಿದೆ ಎದು ಗೊತ್ತಾಗುವುದೇ ಇಲ್ಲ. ಜ್ಞಾಪಕಶಕ್ತಿ ಸಹ ಅಂಥದ್ದೇ. ಶಾಂತವಾಗಿ ಇಟ್ಟುಕೊಂಡಾಗ ಕೆಲಸಕ್ಕೆ ಬರುತ್ತದೆ.
  • ಆರೇಳು ವರ್ಷಗಳ ಸಮಾಲೋಚನೆ ನಂತರ ಬಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಕಲಿಕೆಯಲ್ಲಿ ಕ್ರೀಡೆ ಮತ್ತು ಕೌಶಲಗಳಿಗೆ ಪ್ರಾಧಾನ್ಯ ನೀಡಿದೆ. ಇದು ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss