ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್
ತುಮಕೂರು: ಶಿವಕುಮಾರ ಸ್ವಾಮೀಜಿಗಳ ಜಯಂತಿಯನ್ನು ದಾಸೋಹ ದಿನ ಎಂದು ಈಗಾಗಲೇ ಸರಕಾರ ಆಚರಿಸುತ್ತಿದೆ. ಮಧ್ಯಾಹ್ನದ ಬಿಸಿ ಊಟದ ಯೋಜನೆಗೆ ಡಾ. ಶ್ರೀಶಿವಕುಮಾರ ಸ್ವಾಮೀಜಿಗಳ ಹೆಸರನ್ನಿಡಲು ಸರಕಾರ ಕ್ರಮಕೈಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ತುಮಕೂರಿನ ಶ್ರೀಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ ಶ್ರೀಶಿವಕುಮಾರ ಮಹಾಶಿವಯೋಗಿಗಳ 115ನೇ ಜಯಂತೋತ್ಸವ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.
ಆಡಳಿತಗಾರರು ಶ್ರೀಮಠವನ್ನು ಶ್ರದ್ಧಾ ಭಕ್ತಿಯಿಂದ ಕಂಡಿದ್ದಾರೆ. ನಮ್ಮ ಸರಕಾರವೂ ಅತ್ಯಂತ ಶ್ರದ್ಧೆಯಿಂದ ಕಾಣುತ್ತಿದೆ. ಭಕ್ತಿಯಿಂದ ಬಸವಣ್ಣನವರ ದಾಸೋಹ, ಶಿಕ್ಷಣ, ಆರೋಗ್ಯ ತತ್ವಗಳಿಗೆ ನಮ್ಮ ಸರಕಾರ ಮಹತ್ವ ನೀಡಿದೆ. ಸರ್ವೋದಯ ಕಾರ್ಯಕ್ರಮಕ್ಕೆ ₹ 60 ಸಾವಿರ ಕೋಟಿಗಳಿಗಿಂತ ಹೆಚ್ಚು ಅನುದಾನವನ್ನು ಈ ವರ್ಷದ ಬಜೆಟ್‌ನಲ್ಲಿ ಮೀಸಲಿರಿಸಿದೆ. ಜನಕಲ್ಯಾಣಕ್ಕಾಗಿ ಹಾಗೂ ಜನರ ಪರವಾಗಿ ನಮ್ಮ ಸರಕಾರ ಕೆಲಸ ಮಾಡಲಿದೆ ಎಂದರು.

ಶಿವಕುಮಾರ ಸ್ವಾಮೀಜಿಗಳ ಸ್ಫೂರ್ತಿ:
ಈ ನೆಲದಲ್ಲಿ ಅವರ ಸ್ಫೂರ್ತಿ, ಪ್ರೇರಣೆ ಇದೆ. ಇಲ್ಲಿ ಬಂದರೆ ಮನಸ್ಸಿಗೆ ಶಾಂತಿ, ಬದುಕಿಗೆ ದಾರಿ ಸಿಗುವ ಶಕ್ತಿ ಸಿದ್ದಗಂಗಾ ಕ್ಷೇತ್ರದಲ್ಲಿ ಇದೆ. ಅದೇ ದಾರಿಯಲ್ಲಿ ಸಿದ್ದಲಿಂಗಸ್ವಾಮಿಗಳು ಶಿವಕುಮಾರ ಸ್ವಾಮಿಗಳ ಪರಂಪರೆಯನ್ನು ಅತ್ಯಂತ ಪ್ರಾಮಾಣಿಕವಾಗಿ ದಕ್ಷತೆಯಿಂದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಯೋಗ್ಯವಾಗಿ ಮುನ್ನಡೆಸುತ್ತಿದ್ದಾರೆ ಎಂದರು.
ಶಿವಕುಮಾರ ಸ್ವಾಮೀಜಿ ಅವರು ಸುಮಾರು 88 ವರ್ಷಗಳ ಕಾಲ ಈ ನಾಡಿನ ಸೇವೆಯನ್ನು ಮಠದ ಮುಖಾಂತರ ಮಾಡಿರುವುದು ಒಂದು ದಾಖಲೆ. ಯಾವುದೇ ಪರಪೂಜ್ಯರು ಇಷ್ಟು ದೀರ್ಘಕಾಲದ ಸೇವೆಯನ್ನು ಇಡೀ ಭಾರತ ದೇಶದಲ್ಲಿ ಮಾಡಿಲ್ಲ ಎನ್ನುವುದು ನಮ್ಮೆಲ್ಲರಿಗೂ ಅಭಿಮಾನದ ಸಂಗತಿ. ಅದಕ್ಕಾಗಿಯೇ ಅವರಿಗೆ ನಡೆದಾಡುವ ದೇವರು ಎಂಬ ಬಿರುದು ಬಂದಿದೆ. ಅವರು ಹಚ್ಚಿದ ಒಲೆಯ ಕಿಚ್ಚು ಸುಮಾರು 100 ವರ್ಷಕ್ಕಿಂತ ಹೆಚ್ಚಿನದಾಗಿದ್ದು, ಇಂದಿಗೂ ಉರಿಯುತ್ತಿದೆ. ಎಲ್ಲಿಯವರೆಗೆ ಈ ಅಡಿಗೆ ಒಲೆಯ ಕಿಚ್ಚು ಉರಿಯುತ್ತಿರುತ್ತದೆ, ಅಲ್ಲಿಯವರೆಗೆ ಬಡ ಮಕ್ಕಳ ಹೊಟ್ಟೆ ತಣ್ಣಗಾಗುತ್ತದೆ ಎಂದರು. ನಾವೆಲ್ಲರೂ ಕೋಟಿ ಕೋಟಿ ಗುರುವಂದನೆಗಳನ್ನು ಸದಾ ಸಲ್ಲಿಸಬೇಕು. ಅನ್ನ, ಅಕ್ಷರ, ಆಶ್ರಯಗಳನ್ನು ಅಕ್ಷರಶಃ ಪಾಲಿಸಿದ ದೇವರು ಶಿವಕುಮಾರ ಸ್ವಾಮೀಜಿ ಅವರು. ಅವರು ನಮ್ಮ ನಡುವೆ ಜೀವಂತವಾಗಿದ್ದು, ಪ್ರೇರಣೆ ಮತ್ತು ಆಶೀರ್ವಾದ ನೀಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!