ಸಿ -ಡಿ ವರ್ಗದ ಭೂಮಿಯಲ್ಲಿ ಮನೆಕಟ್ಟಿಕೊಳ್ಳುವವರಿಗೂ ಹಕ್ಕುಪತ್ರ: ಶಾಸಕ ಅಪ್ಪಚ್ಚುರಂಜನ್

ಹೊಸದಿಗಂತ ವರದಿ, ಶನಿವಾರಸಂತೆ:

ಕೆಲವು ನ್ಯೂನ್ಯತೆಗಳಿಂದಾಗಿ ಹಕ್ಕುಪತ್ರವಿಲ್ಲದೆ ಹಲವಾರು ವರ್ಷಗಳಿಂದ ಬಡ ಜನರು ಮನೆ ಕಟ್ಟಿಕೊಳ್ಳಲು ಪರದಾಡುತ್ತಿದ್ದುದನ್ನು ಗಮನಿಸಿದ ರಾಜ್ಯ ಸರಕಾರ ಇದೀಗ ಸಿ ಮತ್ತು ಡಿ ವರ್ಗದ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು ಹಕ್ಕುಪತ್ರ ವಿತರಣೆ ಮಾಡುತ್ತಿದೆ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರಸಂತೆ ಕಂದಾಯ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಹಕ್ಕುಪತ್ರಕ್ಕಾಗಿ 6 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, ವಿಲೇವಾರಿ ಪ್ರಕ್ರಿಯೆಯ ನಂತರ ಹಂತಹಂತವಾಗಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಚಿಂತನೆ ಇದೆ. ಈ ನಿಟ್ಟಿನಲ್ಲಿ 94ಸಿ ನಮೂನೆಯಡಿ ಅರ್ಜಿ ಸಲ್ಲಿಸಿದವರು ಸರಕಾರ ನಿಗದಿ ಮಾಡಿರುವ ಹಣ ಪಾವತಿಸಿ ಹಕ್ಕುಪತ್ರದ ಫಲಾನುಭವಿಯಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಇಂತಹ ಫಲಾನುಭವಿಗಳಿಗೆ ಮಾರ್ಚ್ 31 ರವರೆಗೆ ಸರಕಾರ ಅವಕಾಶ ನೀಡಿದ್ದು, ಈ ಮೂಲಕ ಹಕ್ಕುಪತ್ರ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕೇಂದ್ರ ಸರಕಾರ ಕೊಡಗು ಜಿಲ್ಲೆಗೆ ವಿವಿಧ ಅಭಿವೃದ್ಧಿಗಾಗಿ ನೂರು ಕೋಟಿ ಅನುದಾನ ನೀಡಿದ್ದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಬಡವರ ಶ್ರೆಯೋಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜ್ ಮಾತನಾಡಿ, ಫಲಾನುಭವಿಗಳು ಸರಕಾರ ನೀಡಿರುವ ಹಕ್ಕುಪತ್ರವನ್ನು ಮೂಲ ಮನೆ ಕಟ್ಟಿಕೊಳ್ಳಲು, ಸರಕಾರದಿಂದ ದೊರೆಯುವ ಸೌಲಭ್ಯ, ಪರಿಹಾರ ಮುಂತಾದ ಮೂಲ ಸೌಕರ್ಯಗಳಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು, ಹಕ್ಕುಪತ್ರವು ಫಲಾನುಭವಿಗಳಿಗೆ ಸೂಕ್ತ ದಾಖಲೆಯಾಗಿದ್ದು, ಇದರಲ್ಲಿರುವ ಷರತ್ತು ನಿಯಮಗಳ ಬಗ್ಗೆ ಫಲಾನುಭವಿಗಳು ತಿಳಿದುಕೊಳ್ಳಬೇಕು, ಹಕ್ಕುಪತ್ರವನ್ನು ಬೇರೆಯವರಿಗೆ ಮಾರಾಟ ಮಾಡುವುದು ಅಪರಾಧವಾಗುತ್ತದೆ ಈ ನಿಟ್ಟನಲ್ಲಿ ಫಲಾನುಭವಿಗಳು ಹಕ್ಕುಪತ್ರವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಕಿರಣ್, ಶನಿವಾರಸಂತೆ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಶನಿವಾರಸಂತೆ ಹೋಬಳಿಯ 75 ಮಂದಿ ಫಲಾನುಭವಿಗಳಿಗೆ ಶಾಸಕರು ಹಕ್ಕುಪತ್ರ ವಿತರಣೆ ಮಾಡಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!