ವಿಚಾರಣೆಗೆಂದು ಬಂದಿದ್ದ ಪೊಲೀಸ್‌ ಸಿಬ್ಬಂದಿ ಮೇಲೆಯೇ ಪೆಟ್ರೋಲ್‌ ಎರಚಿ ಬೆಂಕಿಹಚ್ಚಿದ ಕಿಡಿಗೇಡಿ

ಚಿಕ್ಕಮಗಳೂರು:
ವಿಚಾರಣೆಗೆಂದು ಬಂದಿದ್ದ ಪೊಲೀಸ್‌ ಸಿಬ್ಬಂದಿಯ ಮೇಲೆ ಕಿಡಿಗೇಡಿ ಯುವಕನೊಬ್ಬ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿ ಗ್ರಾಪಂ ವ್ಯಾಪ್ತಿಯ ಕೊಗೆ ಗ್ರಾಮದ ಜಂಬೇಕಾಡು ಎಂಬಲ್ಲಿ ನಡೆದಿದೆ.
ಜಂಬೇಕಾಡು ಗ್ರಾಮದ ದೇವರಾಜ್ (25) ಎಂಬಾತ ಈ ದುಷ್ಕೃತ್ಯ ಎಸಗಿದ ಯುವಕನಾಗಿದ್ದಾನೆ. ಘಟನೆಯಲ್ಲಿ ಕೊಪ್ಪ ಪೊಲೀಸ್‌ ಠಾಣೆಯ 112 ವಾಹನ ಚಾಲಕ ತ್ರಿಮೂರ್ತಿ ಗಾಯಗೊಂಡಿದ್ದು, ಆರೋಪಿಯನ್ನು ಸ್ಥಳೀಯರು ಹಿಡಿದು ಮರಕ್ಕೆ ಕಟ್ಟಿಹಾಕಿದ್ದಾರೆ. ದೇವರಾಜ್ ಗ್ರಾಮದಲ್ಲಿ ಆಗಾಗ್ಯೆ ಗಲಾಟೆಗಳನ್ನು ಮಾಡುತ್ತಿದ್ದ. ಮಂಗಳವಾರ ತಂದೆ, ತಾಯಿ ಜೊತೆ ಜಗಳವಾಡಿಕೊಂಡು ತಾನು ವಾಸವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದ್ದ.ಈತನ ಹುಚ್ಚಾಟಗಳಿಂದ ಬೇಸತ್ತ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಕುರಿತು ವಿಚಾರಣೆಗೆ ವಾಹನ ಚಾಲಕ ತ್ರಿಮೂರ್ತಿ ಹಾಗೂ ಪೇದೆ ರಘು ಸ್ಥಳಕ್ಕೆ ಹೋದಾಗ ಘಟನೆ ಸಂಭವಿಸಿದೆ. ಈ ವೇಳೆ ಸಿಬ್ಬಂದಿಯೊಂದಿಗೂ ವಾಗ್ವಾದ ನಡೆಸಿದ ಯುವಕ, ತ್ರಿಮೂರ್ತಿ ಅವರ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಾಚ್ಚಿದ್ದಾನೆ. ಅದೃಷ್ಟವಶಾತ್‌ ಪೆಟ್ರೋಲ್‌ ಕಾಲಿನ ಭಾಗಕ್ಕೆ ಬಿದ್ದಿದ್ದರಿಂದ ಸಿಬ್ಬಂದಿ ಹೆಚ್ಚಿನ ಅಪಾಯಗಳಿಂದ ಪಾರಾಗಿದ್ದಾರೆ. ತಕ್ಷಣವೇ ಸ್ಥಳೀಯರು ಚಾಲಕನ ನೆರವಿಗೆ ಧಾವಿಸಿದ್ದು, ಸಿಬ್ಬಂದಿಯನ್ನು ಕೊಪ್ಪ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.
ಪೊಲೀಸ್ ವಾಹನದ ಚಾಲಕನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಾಕಿದ ದೇವರಾಜ್‌ನನ್ನು ಸ್ಥಳೀಯರು ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ಪತ್ರೆಗೆ ಕೊಪ್ಪ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ಬೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!