ಬಳ್ಳಾರಿ ಜಿಲ್ಲೆಯಲ್ಲಿ ನಡೆಯಿತು ಶಾಂತಿಯುತ ಮತದಾನ

ಹೊಸದಿಗಂತ ವರದಿ, ಬಳ್ಳಾರಿ:

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಣ್ಣ ಪುಟ್ಟ ಘಟನೆ ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಸಂಜೆ 3ರ ವರೆಗೆ ಶೇ.53.27 ರಷ್ಟು ಮತದಾನವಾಗಿದೆ. ಕಂಪ್ಲಿ ಶೇ.64.84, ಸಿರುಗುಪ್ಪ ಶೇ.57.18, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶೇ,53.04, ಬಳ್ಳಾರಿ ನಗರ ಶೇ.41.78, ಸಂಡೂರು ಶೇ.51.95 ಮತದಾನ ವಾಗಿದೆ. ಬೆಳಿಗ್ಗೆ ಬಹುತೇಕ ಜನರು ತಮ್ಮ ವ್ಯಾಪ್ತಿಯ ಮತಗಟ್ಟೆ ಕೇಂದ್ರಕ್ಕೆ ತೆರಳಿ ಸರದಿಯಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡಿದರು.

ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆಯೇ ಮತದಾನ ಪ್ರಕ್ರೀಯೆ ನಿಧಾನಗತಿಯಲ್ಲಿ ನಡೆಯಿತು. ಸಂಜೆ ವೇಳೆ ಮತ್ತೆ ಮತದಾರರು ಮತಗಟ್ಟೆ ಕೇಂದ್ರಕ್ಕೆ ತೆರಳಿ ಸರದಿಯಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬಂತು. ಜಿಲ್ಲೆಯಾದ್ಯಂತ ಅಲ್ಲಲ್ಲಿ ಸಣ್ಣ ಪುಟ್ಟ ಘಟನೆ ಹೊರತು ಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.

ಉತ್ಸಾಹದಿಂದ ಮತಚಲಾಯಿಸಿದ ಯುವ ಮತದಾರ:
ನಗರ ಸೇರಿದಂತೆ ಜಿಲ್ಲೆಯಾದ್ಯಂತ 39,359 ಯುವ ಮತದಾರರು ತಮ್ಮ ಹೆಸರನ್ನು ಮೊದಲ ಬಾರಿಗೆ ನೊಂದಾಯಿಸಿಕೊಂಡಿದ್ದು, ಬೆಳ್ಳಂ ಬೆಳಿಗ್ಗೆ ತಮ್ಮ ವ್ಯಾಪ್ತಿಯ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಅತ್ತ್ಯುತ್ಸಾಹದಿಂದ ಮತದಾನ ಮಾಡಿ ಸಂತಸ ವ್ಯಕ್ತಪಡಿಸಿದರು. ತಾಲೂಕಿನ ಸಂಗನಕಲ್ಲು ಗ್ರಾಮದ ಮತಗಟ್ಟೆ 146ರ ಸರ್ಕಾರಿ ಮಾದರಿ ಹಿರೀಯ ಪ್ರಾಥಮಿಕ ಶಾಲೆಯಲ್ಲಿ ಶ್ರಾವಣಿ ಹಾಗೂ ಚೈತನ್ಯ ಎನ್ನುವವರು ಮೊದಲ ಬಾರಿಗೆ ಮತಚಲಾಯಿಸಿ, ಸಂತಸ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು, ಮೊದಲ ಬಾರಿಗೆ ಮತದಾನ ಮಾಡಿದ್ದು, ಅತ್ಯಂತ ಸಂತಸ ಮೂಡಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೋಬ್ಬರೂ ಮತದಾನ ಮಾಡಬೇಕು, ಅದು ನಮ್ಮ‌ಹಕ್ಕು, ಆಯ್ಕೆ ನಿಮಗೆ ಬಿಟ್ಟಿದ್ದು, ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದರು. ಗ್ರಾಮಾಂತರ ಕ್ಷೇತ್ರದ ಕಮ್ಮರಚೇಡು ಗ್ರಾಮದಲ್ಲಿ 108 ವರ್ಷದ ಸಂಜಮ್ಮ ವಡ್ರಪ್ಪ ವಯೋ ವೃದ್ದೆಯೋಬ್ಬರು ಮತದಾನ ಮಾಡಿ ಗಮನ ಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!