ಕಾರಿಡಾರ್‌ ಉದ್ಘಾಟನೆ ಬಳಿಕ ಕಾಶಿ ವಿಶ್ವನಾಥನ ಸನ್ನಿಧಿಗೆ ಬರುವ ಯಾತ್ರಾರ್ಥಿಗಳ ಪ್ರಮಾಣ 3 ಪಟ್ಟು ಹೆಚ್ಚಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಳೆದ ಆರು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪವಿತ್ರ ಕಾರಿಡಾರ್ ಉದ್ಘಾಟಿಸಿದ ಬಳಿಕ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಪ್ರತಿನಿತ್ಯ ಬರೊಬ್ಬರಿ 5 ರಿಂದ 6 ಲಕ್ಷದಷ್ಟು ಪ್ರವಾಸಿಗರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು
ನ್ಯೂಸ್ 18 ಜಾಲತಾಣ ವರದಿ ಮಾಡಿದೆ.
ಕಾಶಿ ವಿಶ್ವನಾಥ ಧಾಮವನ್ನು ಅತ್ಯದ್ಭುತ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ನೂತನ ಕಾರಿಡಾರ್‌ ನಿರ್ಮಾಣದೊಂದಿಗೆ ದೇವಾಲಯದ ಆವರಣದಲ್ಲಿ ಅತ್ಯಾಧುನಿಕ ಮಾದರಿಯ ʼವಾರಣಾಸಿ ಗ್ಯಾಲರಿʼ ಮತ್ತು ʼಸಿಟಿ ಮ್ಯೂಸಿಯಂʼ ಸ್ಥಾಪಿಸಲಾಗಿದೆ. ಇವುಗಳು ಯಾತ್ರಾರ್ಥಿಗಳಿಗೆ ಧಾರ್ಮಿಕ ಪ್ರವಾಸದೊಂದಿಗೆ ವಿಶೇಷ ಅನುಭವವನ್ನು ನೀಡುತ್ತಿದೆ. ಪ್ರವಾಸಿಗರ ಸಂಖ್ಯೆ ಬಾರೀ ಹೆಚ್ಚಳ ಕಂಡಿರುವುದು ಕಾಶಿ ವಿಶ್ವನಾಥ ವಿಶೇಷ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕೃತ ದಾಖಲೆಗಳ ಮೂಲಕವೇ ತಿಳಿದುಬಂದಿದೆ.

ಶಿವರಾತ್ರಿಯಂದು ದಾಖಲೆ ಪ್ರವಾಸಿಗರು ಭೇಟಿ
ದಾಖಲೆಯ ಪ್ರಕಾರ, ಕಳೆದ ಡಿಸೆಂಬರ್‌ನಲ್ಲಿ ಪಿಎಂ ಮೋದಿ ಅವರು ಕಾರಿಡಾರ್ ಅನ್ನು ಉದ್ಘಾಟಿಸುವುದಕ್ಕಿಂತಲೂ ಮುನ್ನ ನಿತ್ಯ 1.5 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಉದ್ಘಾಟನೆ ಬಳಿಕ ಪ್ರತಿದಿನ ಭೇಟಿ ನೀಡುವ ಪ್ರವಾಸಿಗರ ಸರಾಸರಿ 5 ಲಕ್ಷಕ್ಕೆ ಏರಿದೆ. ಬಸಂತ್ ಪಂಚಮಿ, ಮಹಾ ಶಿವರಾತ್ರಿ, ರಂಗಭಾರಿ ಏಕಾದಶಿ, ಹೋಳಿ, ಶ್ರಾವಣ ಮಾಸದ ಸೋಮವಾರಗಳು, ದೀಪಾವಳಿ ಮತ್ತು ದೇವ್ ದೀಪಾವಳಿ ಹಬ್ಬಗಳಲ್ಲಿ ದೇವಾಲಯಕ್ಕೆ ಗರಿಷ್ಠ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಈ ಶಿವರಾತ್ರಿಯ ದಿನದಂದು ( ಮಾರ್ಚ್ 1) ದಾಖಲೆಯ 6.5 ಲಕ್ಷ ಯಾತ್ರಾರ್ಥಿಗಳು ದೇವಾಲಯ ಮತ್ತು ಕಾರಿಡಾರ್‌ಗೆ ಭೇಟಿ ನೀಡಿದ್ದಾರೆ. 2021 ರ ಡಿಸೆಂಬರ್ 13 ರಂದು 50,000 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ʼಕಾಶಿ ವಿಶ್ವನಾಥ ಧಾಮ ಕಾರಿಡಾರ್‌ʼ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!