ಹೊಸದಿಗಂತ ವರದಿ,ಹಾವೇರಿ:
ಜನತೆ ಫಲಾನುಭವಿಗಳಲ್ಲ. ಈ ದೇಶ ಕಟ್ಟಲು ಅವರೆಲ್ಲ ಪಾಲುದಾರರು. ಸರ್ಕಾರದ ಸೌಲಭ್ಯ ಜನತೆಯ ಹಕ್ಕು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಹಲವಾರು ಸ್ಥರಗಳಲ್ಲಿ ಬದುಕುತ್ತಿರುವವರನ್ನು ಸಶಕ್ತಗೊಳಿಸಿದರೆ ರಾಜ್ಯ ಮತ್ತು ದೇಶ ಪ್ರಗತಿಯಾಗುತ್ತದೆ. ಇದರಿಂದ ದೇಶದ ಪ್ರಗತಿಯಲ್ಲಿ ಪಾಲುದಾರರು ಮತ್ತು ಹಕ್ಕುದಾರರು ಆಗುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾತಿ ಹೇಳಿದರು.
ನಗರದ ಡಾ. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿನ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ೨ ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಲಾಭವಾಗಿದೆ. ಕಳೆದ ೪ ವರ್ಷದಲಿ ೪.೫ ಲಕ್ಷ ಫಲಾನುಭವಿಗಳು ವಿವಿಧ ಯೋಜನೆಗಳಲ್ಲಿ ಲಾಭವನ್ನು ಪಡೆದುಕೊಂಡಿದ್ದಾರೆ ಎಂದರು.
ಬಡತನ ಎನ್ನುವಂತಹದು ಹುಟ್ಟಿನಿಂದ ಇದ್ದರೂ ಸಾವಿನಲ್ಲಿ ಬಡತನ ಎನ್ನುವುದು ಇರಬಾರದು. ಸಾಯುವುದಕ್ಕೂ ಪೂರ್ವದಲ್ಲಿ ಸಾಧನೆಯನ್ನು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗುವತ್ತ ಗಮನಕೊಡಬೇಕು. ಮನೆಯ ಮಕ್ಕಳನ್ನು ಉತ್ತಮವಾಗಿ ಬೆಳೆಸಿ ದೇಶದ ಪ್ರಗತಿಯಲ್ಲಿ ಅವರನ್ನಲ್ಲದೆ ಕುಟುಂಬದ ಎಲ್ಲ ಸದಸ್ಯರು ಪಾಲುದಾರಗಬೇಕು ಎಂದರು.
ನರೇಂದ್ರ ಮೋದಿಯವರ ಮಾಡಿದ ಯೋಜನೆಗಳಿಂದ ಅವರೊಬ್ಬ ದೇಶ ಭಕ್ತ, ಬಡವರ ಬಂಧು ಪ್ರಧಾನಿ ಎನ್ನುವುದು ತಿಳಿಯುತ್ತದೆ. ಒಂದು ಕುಟುಂಬ ಬದುಕನ್ನು ಕಟ್ಟಿಕೊಳ್ಳಲಿಕ್ಕೆ ಬೇಕಾದ ಎಲ್ಲ ಯೋಜನೆಗಳನ್ನು ಅವರು ನೀಡಿದ್ದಾರೆ.
ಕಿಸಾನ್ ಸನ್ಮಾನ್ ಯೋಜನೆಯಿಂದ ಕಳೆದ ವರ್ಷ ೧೬ ಸಾವಿರ ಕೋಟಿ ರೂಗಳು ರೈತರಿಗೆ ಮುಟ್ಟಿವೆ. ರೈತರ ಕೃಷಿ ಚಟುವಟಿಕೆಗಳು ಪ್ರಾರಂಭಕ್ಕೂ ಪೂರ್ವದಲ್ಲಿ ಅವರಿಗೆ ಬೀಜ ಗೊಬ್ಬರ ತರುವುದಕ್ಕೆ ಅನುಕೂಲವಾಗಲೆಂದು ೧೦ ಸಾವಿರ ರೂಗಳನ್ನು ನೀಡುವ ವಿನೂತನ ಯೋಜನೆಯನ್ನು ಪ್ರಸಕ್ತ ಬಜೆಟ್‌ದಲ್ಲಿ ನೀಡಿದ್ದೇವೆ ಎಂದರು.
ವಿದ್ಯಾರ್ಥಿನಿಯರಿಗೆ, ದುಡಿಯುವ ಮಹಿಳೆಯರೂ ಸೇರಿ ಒಟ್ಟು ೪೦ ಲಕ್ಷ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ಬಾಬು ಜಗಜೀಮನ್‌ರಾವ್ ಯೋಜನೆಯಲ್ಲಿ ಪ್ರತಿ ಕ್ಷೇತ್ರಕ್ಕೆ ೧೦೦ ದ್ವಿಚಕ್ರ ವಾಹನಗಳನ್ನು ನೀಡುವ ಮೂಲಕ ಮಾರುಕಟ್ಟೆ ಜೋಡಿಸುವ ಕೆಲಸವನ್ನು ಮಾಡಲಾಗಿದೆ. ಎಸ್ಸಿ, ಎಸ್ಟಿ ಜನತೆ ಒಂದು ಎಕರೆ ಭೂಮಿ ಕೊಳ್ಳಲು ೨೦ ಲಕ್ಷರೂಗಳನ್ನು ನೀಡಲಾಗುತ್ತಿದೆ ಎಂದರು.
ಎಸ್ಸಿ, ಎಸ್ಟಿ ಜಾತಿ ಪಟ್ಟಿಯಲ್ಲಿ ಅನೇಕ ಜಾತಿಗಳು ಸೇರಿಕೊಂಡಿವೆ ಆದರೆ ಮೀಸಲಾತಿ ಪ್ರಮಾಣ ಮಾತ್ರ ಏರಿಲ್ಲ. ಈ ಸಮುದಾಯಗಳಿಗೆ ಕಾನೂನು ಭದ್ಧವಾಗಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಸಧ್ಯದಲ್ಲಿನೇ ಲೋಕಸಭೆಯಲ್ಲಿ ಒಪ್ಪಿಗೆ ಮುದ್ರೆ ಬಿದ್ದು ದೇಶಕ್ಕೆ ಮಾದರಿಯಾಗಲಿದೆ. ಮಿಸಲಾತಿ ವಿಷಯ ಜೇನುಗೂಡೆಂದು ಕಿವಿಯಲ್ಲಿ ಹೇಳುವ ಮೂಲಕ ನನ್ನನ್ನು ಹೆದರಿಸುತ್ತಿದ್ದರು. ಆದರೆ ಈ ಸಮುದಾಯಗಳಿಗೆ ನ್ಯಾಯ ಒದಗಿಸುವುದಕ್ಕೆ ಜೇನುಗೂಡಲ್ಲ ಹಾವಿನ ಹುತ್ತಕ್ಕೂ ಕೈ ಹಾಕಲು ಸಿದ್ಧ ಎನ್ನುವುನ್ನು ನಾನು ಹೇಳಿದ್ದೇನೆ. ಲಂಬಾಣಿ ಸಮುದಾಯ ವಾಸಿಸುತ್ತಿದ್ದ ಒಂದು ಲಕ್ಷ ಜನಾಂಕಕ್ಕೆ ಹಕ್ಕು ಪತ್ರ ನೀಡುವ ಕೆಲಸವನ್ನು ದಾವಣಗೇರಿಯಲ್ಲಿ ಸಧ್ಯದಲ್ಲಿನೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಎಸ್ಸಿ.ಎಸ್ಟಿ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ, ಪ್ರಭು ಚವ್ಹಾಣ, ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡರ, ಉಪಾಧ್ಯಕ್ಷ ಬಸನಗೌಡ ಮೇಲಿನಮನಿ, ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.