ನುಡಿದಂತೆ ನಡೆಯುವ ಬಿಜೆಪಿ ಸರಕಾರಗಳ ಬಗ್ಗೆ ಕರ್ನಾಟಕದ ಜನರ ನಂಬಿಕೆ: ಸುಧಾಂಶು ತ್ರಿವೇದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು: ಕಾಂಗ್ರೆಸ್ ಪಕ್ಷ ಹೇಳಿದ್ಯಾವುದನ್ನೂ ಈಡೇರಿಸುವುದಿಲ್ಲ. ಅವರು ನುಡಿದಂತೆ ನಡೆಯದವರು. ನಮ್ಮದು ನುಡಿದಂತೆ ನಡೆಯುವ ಪಕ್ಷ ಮತ್ತು ಸರಕಾರ. ಬಿಜೆಪಿ ಬಗ್ಗೆ ಜನರಿಗೆ ನಂಬಿಕೆ- ವಿಶ್ವಾಸ ಇದೆ. ಜನರು ಮತ್ತೆ ಬಿಜೆಪಿಗೆ ಬಹುಮತ ನೀಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಜನರನ್ನು ಮೋಸಗೊಳಿಸಲು ಮುಂದಾಗಿದೆ. ಆದರೆ, ಜನರು ಪ್ರಧಾನಿ ಮೋದಿಜಿ ಅವರ ‘ನುಡಿದಂತೆ ನಡೆಯುವ’ ಪ್ರವೃತ್ತಿಯನ್ನು ಮೆಚ್ಚಿಕೊಂಡಿದ್ದಾರೆ. ಆ ಬಗ್ಗೆ ನಂಬಿಕೆ ಇಟ್ಟಿದ್ದಾರೆ. 2019ರಲ್ಲಿ ನಾವು ಕಿಸಾನ್ ಸಮ್ಮಾನ್ ನಿಧಿಯಡಿ ವರ್ಷಕ್ಕೆ 6 ಸಾವಿರ ಕೊಡುವುದಾಗಿ ಹೇಳಿದ್ದೆವು. ಆದರೆ, ರಾಹುಲ್ ಗಾಂಧಿ ತಿಂಗಳಿಗೆ 6 ಸಾವಿರ ಕೊಡುವ ಭರವಸೆ ಕೊಟ್ಟರು. ವರ್ಷಕ್ಕೆ 72 ಸಾವಿರ ನೀಡಲಸಾಧ್ಯ ಎಂದು ಜನರಿಗೂ ತಿಳಿದಿತ್ತು. ಆದ್ದರಿಂದ ಜನರು ಅವರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಲಿಲ್ಲ ಎಂದು ವಿಶ್ಲೇಷಿಸಿದರು.

ಯಡಿಯೂರಪ್ಪ- ಬೊಮ್ಮಾಯಿಯವರ ಸರಕಾರವು ಅತ್ಯುತ್ತಮವಾಗಿ ಕೆಲಸ ಮಾಡಿದೆ. ಕರ್ನಾಟಕದ ಜನತೆ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಬಿಜೆಪಿ ಪರವಾಗಿ ಜನಮತ ನೀಡಬೇಕು. ಎ.ಸಿ.ರೂಮಿನಲ್ಲಿ ಕುಳಿತವರಿಗೆ ಹಿಂದೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಿತ್ತು. ಈಗ ರಾಷ್ಟ್ರಪತಿ ಭವನಕ್ಕೆ ಬರಿಗಾಲಲ್ಲಿ ಬಂದ ತುಳಸಿ ಗೌಡ ಅವರಂಥ ಅರ್ಹರಿಗೆ ಆ ಪ್ರಶಸ್ತಿ ಸಿಗುತ್ತಿದೆ ಎಂದು ತಿಳಿಸಿದರು.

2014ರಲ್ಲಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ ಸರಕಾರ ಆಡಳಿತಕ್ಕೆ ಬಂದ ಬಳಿಕ ವಲಯವಾರು ಬಜೆಟ್ ಮೊತ್ತವು ರೂ.22,900 ಕೋಟಿ (2014) ಇದ್ದುದು 2022ರಲ್ಲಿ 69 ಸಾವಿರ ಕೋಟಿಗೆ ಏರಿಕೆ ಕಂಡಿದೆ. ಕೇಂದ್ರದಿಂದ ಕರ್ನಾಟಕ ರಾಜ್ಯ ಸರಕಾರಕ್ಕೆ ನೀಡುವ ಅನುದಾನದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ವಿವರಿಸಿದರು.

ಪಿಎಂ ಸುರಕ್ಷಾ ವಿಮಾ ಯೋಜನೆಯಡಿ 144 ಕೋಟಿ ಕ್ಲೈಮ್‍ಗಳಿಗೆ ಹಣ ಕೊಡಲಾಗಿದೆ. ಪಿಎಂ ಮುದ್ರಾ ಯೋಜನಾದಡಿ 3.49 ಕೋಟಿ ಫಲಾನುಭವಿಗಳು ಕರ್ನಾಟಕದಲ್ಲಿದ್ದು, ಈ ಪೈಕಿ 2.39 ಕೋಟಿ ಮಹಿಳೆಯರು ಇದ್ದಾರೆ. ಬಡವರು ಮತ್ತು ಮಧ್ಯಮ ವರ್ಗದವರ ಸಶಕ್ತೀಕರಣಕ್ಕೆ ಇದು ಪ್ರಮುಖ ಉದಾಹರಣೆ ಎಂದರು.

ಜಿಎಸ್‍ಟಿ ಮೊತ್ತ 70 ಸಾವಿರ ಕೋಟಿ ರೂಪಾಯಿಯನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡಲಾಗಿದೆ. ಬೆಂಗಳೂರನ್ನು ದೇಶದ ಬುದ್ಧಿವಂತರ ರಾಜಧಾನಿ ಎಂದು ಕರೆಯಲಾಗುತ್ತದೆ. ಮೂಲಸೌಕರ್ಯ ಹೆಚ್ಚಳಕ್ಕೆ ಆದ್ಯತೆ ಕೊಟ್ಟಿದ್ದು, ಕರ್ನಾಟಕದ ಬೆಂಗಳೂರಿನ ವಿಮಾನನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆ ಮಾಡಲಾಗಿದೆ. ಹಿಂದೆ ರಾಜ್ಯದಲ್ಲಿ 4 ವಿಮಾನನಿಲ್ದಾಣಗಳಿದ್ದು, ಇದೀಗ ಹೆಚ್ಚುವರಿಯಾಗಿ ಶಿವಮೊಗ್ಗ, ಕಲಬುರ್ಗಿ, ಬೀದರ್ ಮತ್ತು ಹಿಂದೆ ಹೆಸರಿಗಷ್ಟೇ ವಿಮಾನನಿಲ್ದಾಣವಾಗಿದ್ದ ಮೈಸೂರಿನಲ್ಲಿ ಹೊಸ ಪೂರ್ಣ ಪ್ರಮಾಣದ ವಿಮಾನನಿಲ್ದಾಣ ಆರಂಭವಾಗಿದೆ ಎಂದು ತಿಳಿಸಿದರು.

ರೈಲ್ವೆ ಲೈನ್ ವಿದ್ಯುದೀಕರಣಕ್ಕೆ ಗರಿಷ್ಠ ಹಣ ನೀಡಲಾಗಿದೆ. 2014ರಲ್ಲಿ 835 ಕೋಟಿ ಅನುದಾನ ನೀಡಿದ್ದು, ಈ ವರ್ಷ ಅದು 6,091 ಕೋಟಿಗೆ ಏರಿದೆ. ಬೆಂಗಳೂರು- ಮೈಸೂರು ದಶಪಥ ಹೈವೇ ರಸ್ತೆ ಉದ್ಘಾಟನೆ ಆಗಿದ್ದು, 3 ಗಂಟೆ ಪ್ರಯಾಣವು 75 ನಿಮಿಷಕ್ಕೆ ಇಳಿದಿದೆ. ತುಮಕೂರಿನಲ್ಲಿ ಎಚ್‍ಎಎಲ್ ಹೆಲಿಕಾಪ್ಟರ್ ಕಾರ್ಖಾನೆ ಉದ್ಘಾಟನೆಯಾಗಿದೆ. ರಾಜ್ಯದ ಜನಸಂಖ್ಯೆಯ ಜಿಡಿಪಿ ಕೂಡ ಹೆಚ್ಚಾಗಿದೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದ ಅನುದಾನವು 5,241 ಕೋಟಿಯಿಂದ 11,607 ಕೋಟಿಗೆ ಏರಿಕೆ ಕಂಡಿದೆ. ಧಾರವಾಡಕ್ಕೆ ಐಐಟಿ ನೀಡಲಾಗಿದೆ. ಮನೆಮನೆಗೆ ನಳ್ಳಿ ನೀರು ಕೊಡುವ ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ 1.01 ಕೋಟಿ ಮನೆಗಳ ಪೈಕಿ 61.56 ಲಕ್ಷ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕೊಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 27 ಲಕ್ಷ ಜನರಿಗೆ ಪ್ರಯೋಜನ ಲಭಿಸಿದೆ ಎಂದು ವಿವರ ನೀಡಿದರು.

ಶೇ 25ರಷ್ಟು ಐಫೋನ್ ಉತ್ಪಾದನೆಯ ಸಾಧನೆ ಸಾಧ್ಯವಾಗಿದೆ. ಈ ಫ್ಯಾಕ್ಟರಿ ಚೀನಾದಿಂದ ಇಲ್ಲಿಗೆ ಸ್ಥಳಾಂತರಗೊಂಡಿದೆ. ರಕ್ಷಣಾ ಸಾಮಗ್ರಿ ರಫ್ತಿನಲ್ಲೂ ಭಾರತ ಮುಂಚೂಣಿ ಸ್ಥಾನ ಪಡೆದಿದೆ. 34 ವಿದೇಶಿ ರಾಷ್ಟ್ರಗಳ ವಿದೇಶಾಂಗ ಸಚಿವರು ಇಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ಮತ್ತು ಬೆಂಗಳೂರಿನ ಸಾಧನೆಗೆ ಇದು ಕೈಗನ್ನಡಿ ಎಂದರು.

ಇನ್ನೊಂದೆಡೆ ಕೆಲವರು ಸುಳ್ಳು ಭರವಸೆ ನೀಡುತ್ತಾ ಬರುತ್ತಿದ್ದಾರೆ. ಈ ಹಿಂದೆ ನೀಡಿದ್ದ ಭರವಸೆಗಳನ್ನೇ ಅವರು ಈಡೇರಿಸಿಲ್ಲ. ನಿರುದ್ಯೋಗಿ ಯುವಕರಿಗೆ ನಿಗದಿತ ಮಾಸಿಕ ಭತ್ಯೆ ಕೊಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ರಾಜಸ್ಥಾನದಲ್ಲಿ ಇದೇ ಮಾದರಿಯ ಆಶ್ವಾಸನೆ ನೀಡಿದ್ದರು. 5 ವರ್ಷ ಕಳೆಯುತ್ತ ಬಂದರೂ ಅದನ್ನು ಈಡೇರಿಸಿಲ್ಲ ಎಂದು ಟೀಕಿಸಿದರು.

ಛತ್ತೀಸ್‍ಗಡದಲ್ಲಿ ಅಧಿಕಾರ ಪಡೆದ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದರು. 5 ವರ್ಷ ಕಳೆದರೂ ಅದು ಈಡೇರಿಲ್ಲ ಎಂದು ಆಕ್ಷೇಪಿಸಿದರು. ಹಿಮಾಚಲ ಪ್ರದೇಶದಲ್ಲಿ ಕನಿಷ್ಠ ಮತಗಳ ಅಂತರದಿಂದ ಕಾಂಗ್ರೆಸ್ ಅಧಿಕಾರ ಪಡೆದಿದೆ. ಅಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಕಡಿತ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಪಕ್ಷವು ತೆರಿಗೆ ಹೆಚ್ಚಿಸಿದೆ. ನಾವು ಹೇಳಿದ್ದನ್ನು ಮಾಡುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!