ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅರ್ಥ ಮತ್ತು ಉದ್ದೇಶ ಇಲ್ಲದಿರುವುದರಿಂದ ಜನ ತಿರಸ್ಕರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಜನರಿಂದ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಇದು ಜನಪರವಲ್ಲ ಮತ್ತು ಉದ್ದೇಶದ ಕೊರತೆಯಿದೆ ಜನ ತಿರಸ್ಕರಿಸಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದರು ಬೆಲೆ ಮತ್ತು ನಿರುದ್ಯೋಗ ವಿರೋಧಿಸಿ ಬಳ್ಳಾರಿ ಪಾದಯಾತ್ರೆ ಕೈಗೊಂಡಿದ್ದೆವು. ನಾನು ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದೆ.
ಬಿಜೆಪಿ-ಜೆಡಿಎಸ್ ಪಾದಯಾತ್ರೆಯ ಉದ್ದೇಶವೇನು? ಒಬಿಸಿ ನಾಯಕರೊಬ್ಬರು ಎರಡನೇ ಅವಧಿಗೆ ಸಿಎಂ ಆಗಿರುವುದನ್ನು ಅರಗಿಸಿಕೊಳ್ಳಲಾಗದೆ ಈ ರೀತಿ ಮಾಡುತ್ತಿದ್ದಾರೆ. ಅವರ ಪಾದಯಾತ್ರೆಗೆ ಜನ ಸ್ಪಂದಿಸುತ್ತಿಲ್ಲ, ಜೆಡಿಎಸ್ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಯಾತ್ರೆಯಲ್ಲಿ ಬೇರೆ ರಾಜ್ಯಗಳಿಂದ ಬಿಜೆಪಿ ಕಾರ್ಯಕರ್ತರು ಬಂದಿಲ್ಲ ಎಂಬುದು ಟಿವಿ ವರದಿಗಳನ್ನು ನೋಡಿದರೆ ಗೊತ್ತಾಗುತ್ತದೆ ಎಂದರು.