Saturday, April 1, 2023

Latest Posts

`ಬೋಪಯ್ಯ ಏನು ಮಾಡಿದ್ದಾರೆಂಬುದಕ್ಕೆ ಜನರ ಸ್ಪಂದನೆಯೇ ಉತ್ತರ’

ಹೊಸದಿಗಂತ ವರದಿ ಮಡಿಕೇರಿ:

ಕೆ.ಜಿ.ಬೋಪಯ್ಯ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರಿಗೆ ಗೋಣಿಕೊಪ್ಪಲುವಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಗೆ ದೊರಕಿರುವ ಅಭೂತಪೂರ್ವ ಜನ ಸ್ಪಂದನೆಯೇ ಸಮರ್ಪಕವಾದ ಉತ್ತರ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ನುಡಿದರು. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ದೊರೆತ ಜನಸ್ಪಂದನವನ್ನು ಕಣ್ತುಂಬಿಕೊಂಡು ಭಾವನಾತ್ಮಕವಾಗಿ ಮಾತನಾಡಿದ ಅವರು, ಅಪಪ್ರಚಾರದಿಂದ ಬಿಜೆಪಿಯನ್ನು ಏನೂ ಮಾಡಲಾಗದು ಎಂದು ಹೇಳಿದರು.

ಬಿಜೆಪಿಗೆ ಕಾರ್ಯಕರ್ತರೇ ಶಕ್ತಿಯಾಗಿದ್ದು, ಅಪಪ್ರಚಾರಕ್ಕೆ ಕಿವಿಗೊಡದೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕೆಂದು ಸಲಹೆ ಮಾಡಿದರು. ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಿ. ಬಿಜೆಪಿ ಸದಾ ಜನಪರವಾಗಿದೆ ಎಂಬುದನ್ನು ಮತದಾರರಿಗೆ ತಿಳಿಸಿ ಎಂದ ಅವರು, ಬೊಮ್ಮಾಯಿ, ಯಡಿಯೂರಪ್ಪ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ನೀಡಿದ ಜನಪರ ಸೌಲಭ್ಯಗಳನ್ನು ಜನರಿಗೆ ಮತ್ತೊಮ್ಮೆ ನೆನಪಿಸಿ ಎಂದು ಕಿವಿಮಾತು ಹೇಳಿದರು.

ಕೊಡಗಿಗೆ ಅತ್ಯಧಿಕ ಅನುದಾನ ಬರುವಲ್ಲಿ ಕೆ.ಎಸ್. ಈಶ್ವರಪ್ಪ ಕೂಡಾ ಕಾರಣರು ಎಂದ ಕೆ.ಜಿ.ಬೋಪಯ್ಯ, ಜಮ್ಮಾ ಬಾಣೆ ಸಮಸ್ಯೆ ನಿವಾರಿಸುವಲ್ಲಿ ಸದಾಯನಂದಗೌಡರ ಕೊಡುಗೆ ಸ್ಮರಣೀಯ ಎಂದ ಬೋಪಯ್ಯ, ಕೆ.ಎಸ್. ಈಶ್ವರಪ್ಪ ಹಾಗೂ ಡಿ.ವಿ.ಸದಾನಂದ ಗೌಡ, ವೀರಾಜಪೇಟೆ ಕ್ಷೇತ್ರದ ಜನತೆ ಮೇಲೆ ಪ್ರೀತಿಯಿಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ನುಡಿದರು.

ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಯಾಗುತ್ತಿದೆ. ವಿಪರೀತ ಮಳೆಯಿಂದಾಗಿ ರಸ್ತೆ ದುರಸ್ತಿ ವಿಳಂಬವಾಗಿದೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಕೋವಿಡ್ ಸಂದರ್ಭ ಉಚಿತವಾಗಿ ಲಸಿಕೆ ನೀಡಿ ಜನರ ಜೀವ ಉಳಿಸಿದ ಕೀರ್ತಿ ಬಿಜೆಪಿಯ ನಾಯಕ ಪ್ರಧಾನಿ ಮೋದಿ ಅವರದ್ದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!