Thursday, February 2, 2023

Latest Posts

ಪೌತಿಖಾತೆ ವಿಳಂಬಕ್ಕೆ ಸಿಕ್ಕಿದೆ ಶಾಶ್ವತ ಪರಿಹಾರ: ಸಚಿವ ಅಶೋಕ್

ಹೊಸದಿಗಂತ ವರದಿ,ಹಾವೇರಿ:

ಪೌತಿಖಾತೆ ವಿಳಂಬಕ್ಕೆ ಅವಕಾಶವಿಲ್ಲದೆ ಸಕಾಲದಲ್ಲಿ ದಾಖಲೆಗಳನ್ನು ನೀಡಲು ನಿಯಮಗಳನ್ನು ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ರೈತರಿಗೆ ಕಂದಾಯ ಸಚಿವ ಆರ್. ಅಶೋಕ ಅವರು ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಶಿಗ್ಗಾವ ತಾಲೂಕಿನ ಬಾಡ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರ ಎರಡನೇ ದಿನದ ದಿನಚರಿಯ ಕೊನೆಯ ಕಾರ್ಯಕ್ರಮವಾಗಿ ಪೌತಿಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ, ರೈತರಿಗೆ ಆರ್‌ಟಿಸಿ ವಿತರಣೆ ಮಾಡಿ ಮಾತನಾಡಿದರು.
ಪೌತಿಖಾತೆ ಸೇರಿದಂತೆ ರೈತರು ಕಂದಾಯ ದಾಖಲೆಗಳನ್ನು ಪಡೆಯುವಾಗ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿತ್ತು. ತಿಂಗಳಾನುಗಟ್ಟಲೆ ವಿಳಂಬವಾಗುತ್ತಿತ್ತು. ಈ ಎಲ್ಲದಕ್ಕೂ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಕಾಲಮಿತಿಯೊಳಗೆ ರೈತರ ಅಗತ್ಯ ದಾಖಲೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಗ್ರಾಮ ಸಭೆ
ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆ ೯ ಗಂಟೆಗೆ ಬಾಡ ಗ್ರಾಮದ ಕನಕ ವೃತ್ತದ ಅರಳಿಕಟ್ಟೆಯಲ್ಲಿ ಗ್ರಾಮ ಸಭೆ ನಡೆಸಿದ ಸಚಿವರು, ಗ್ರಾಮ ವಾಸ್ತವ್ಯದ ಅಂಗವಾಗಿ ಗ್ರಾಮಕ್ಕೆ ಬಿಡುಗಡೆಮಾಡಲಾದ ೧ ಕೋಟಿರೂ ಅನುದಾನದಲ್ಲಿ ಗ್ರಾಮಕ್ಕೆ ಅಗತ್ಯವಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು ಅಂತಿಮವಾಗಿ ಈ ಅನುದಾನದಲ್ಲಿ ಗರಡಿಮನೆ, ಲೈಬ್ರರಿ ಇದರಲ್ಲಿ ಹಣ ಉಳಿದರೆ ಶಾಲಾ ಕಂಪೌಂಡ್ ಮತ್ತು ಆಟದ ಮೈದಾನ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು.
ಪ್ರವಾಸೋದ್ಯಮ ಐಕಾನ್
ಗ್ರಾಮ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ದಾಸಶ್ರೇಷ್ಠ ಕನಕದಾಸರ ಜನ್ಮಭೂಮಿಯಾದ ಬಾಡ ಗ್ರಾಮವನ್ನು ಪ್ರವಾಸೋದ್ಯಮ ಐಕಾನ್ ಆಗಿ ಅಭಿವೃದ್ಧಿಪಡಿಸಬೇಕು ಎಂದು ಯುವಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಎದುರಿಸಲು ಅನುಕೂಲಕರ ಪುಸ್ತಕಗಳ ಪೂರೈಸಿವುದು, ಸಂಜೀವಿ ಯೋಜನೆಯಡಿ ಮಹಿಳಾ ಉದ್ಯಮಿಗಳ ಆರ್ಥಿಕ ಚಟುವಟಿಕೆಗಳಿಗೆ ಮಳಿಗೆಗಳ ನಿರ್ಮಾಣ, ಹೈಟೆಕ್ ಆಸ್ಪತ್ರೆ, ಪ್ರೌಢಶಾಲೆ ಮಂಜೂರಾತಿ, ಸ್ಮಶಾನ ಜಾಗ ಒಳಗೊಂಡಂತೆ ಹಲವು ಸಲಹೆಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್, ಇತರ ಅಧಿಕಾರಗಳಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!