August 10, 2026
Monday, August 10, 2026
spot_img

ಮನವೊಲಿಕೆ ಸಕ್ಸಸ್: ಉಪವಾಸ ಅಂತ್ಯಗೊಳಿಸಿದ ವಾಂಗ್‌ಚುಕ್; ಕೇಂದ್ರ ಕೊಟ್ಟ 3 ಭರವಸೆಗಳೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್, 26 ದಿನಗಳ ಬಳಿಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಕೆಲವು ಭರವಸೆಗಳ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಸರ್ಕಾರದಿಂದ ಮೂರು ಪ್ರಮುಖ ಭರವಸೆ

ಕೇಂದ್ರ ಸರ್ಕಾರವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ. ಜೊತೆಗೆ, ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವುದು ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ವಿಚಾರವನ್ನೂ ಪರಿಗಣಿಸುವುದಾಗಿ ತಿಳಿಸಿದೆ.

ಕೇಂದ್ರ ಸಚಿವರ ಸಮ್ಮುಖದಲ್ಲಿ ಉಪವಾಸ ಅಂತ್ಯ

ಗುರುಗ್ರಾಮದ ಮೆದಾಂತಾ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಸೋನಂ ವಾಂಗ್‌ಚುಕ್ ಉಪವಾಸ ಮುರಿದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡ ಅವರು, ದೇಶದಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆಯದಂತೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ಆರೋಗ್ಯದ ಬಗ್ಗೆ ಮೋದಿ ಕಳಕಳಿ

ಪ್ರಧಾನಿ ನರೇಂದ್ರ ಮೋದಿ, ವಾಂಗ್‌ಚುಕ್ ಶೀಘ್ರ ಚೇತರಿಸಿಕೊಂಡು ವೈದ್ಯರ ಸಲಹೆ ಪಾಲಿಸಬೇಕು ಎಂದು ಹಾರೈಸಿದ್ದಾರೆ. ಸುಮಾರು 26 ದಿನಗಳ ಉಪವಾಸದಿಂದ ಅವರ ತೂಕ ಗಮನಾರ್ಹವಾಗಿ ಇಳಿದಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !