September 17, 2026
Thursday, September 17, 2026
spot_img

ಮೀನುಗಾರರಿಗೆ ಕಂಟಕವಾದ ʼಹೂಳುʼ: ಎರಡು ದಿನದಲ್ಲಿ 2 ಬೋಟ್‌ ಸಮುದ್ರ ಪಾಲು

ಹೊಸದಿಗಂತ ವರದಿ ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟು ಅಳಿವೆ ಪ್ರದೇಶದಲ್ಲಿ ಮುಳುಗಡೆಯಾಗಿದ್ದು ಎರಡೇ ದಿನಗಳ ಅಂತರದಲ್ಲಿ ಎರಡು ಬೋಟುಗಳು ಸಮುದ್ರ ಪಾಲಾದಂತಾಗಿದೆ.

ತದಡಿ ಮೀನುಗಾರಿಕೆ ಬಂದರು ಪ್ರದೇಶದಿಂದ ಮೀನುಗಾರಿಕೆಗೆಂದು ಹೊರಟಿದ್ದ ಸುರೇಂದ್ರ ಮೂಡಂಗಿ ಎನ್ನುವವರಿಗೆ ಸೇರಿದ್ದ ಮೀನುಗಾರಿಕೆ ಬೋಟು ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು
ಬೋಟಿನಲ್ಲಿದ್ದ ನಾಲ್ಕು ಜನ ಕಾರ್ಮಿಕರನ್ನು ಬೇರೊಂದು ಬೋಟಿನವರು ರಕ್ಷಣೆ ಮಾಡಿದ್ದಾರೆ.

ತದಡಿ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳುವ ಮತ್ತು ಮೀನುಗಾರಿಕೆಗೆ ಅನುಕೂಲಕರವಾದ ಅಳಿವೆ ಪ್ರದೇಶದಲ್ಲಿ ನೀರಿನ ತಳಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕೆಸರು ತುಂಬಿಕೊಂಡಿದ್ದು ಮೀನುಗಾರಿಕೆಗೆ ತೆರಳುವ ಬೋಟುಗಳಿಗೆ ಕಂಟಕಕಾರಿಯಾಗಿ ಪರಿಣಮಿಸಿದೆ. ಹೂಳೆತ್ತುವ ಕೆಲಸ ನಡೆಸಬೇಕು ಎಂದು ಸಾಕಷ್ಟು ಬಾರಿ ಮೀನುಗಾರರು ಮನವಿ ಮಾಡಿದ್ದಾರಾದರೂ ಇದುವರೆಗೆ
ಯಾವುದೇ ಕಾಮಗಾರಿ ನಡೆಯದೇ ಹೂಳು ಇನ್ನಷ್ಟು ಹೆಚ್ಚುತ್ತಲೆ ಇದೆ ಬೋಟುಗಳ ತಳಭಾಗ ಹೂಳಿನಲ್ಲಿ ಸಿಲುಕಿ ಬೋಟು ನಿಯಂತ್ರಣ ತಪ್ಪುವುದು ಅಥವಾ ತಳಭಾಗ ಒಡೆದು ನೀರು ಒಳ ಪ್ರವೇಶಿಸುವುದರಿಂದ ಅವಘಡಗಳು ಸಂಭವಿಸುತ್ತಿವೆ.

ಎರಡು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಕಿಮಾನಿಯ ಮೋಹನ ಹರಿಕಂತ್ರ ಎನ್ನುವವರಿಗೆ ಸೇರಿದ್ದ ಶ್ರೀದೇವಿ ಹೆಸರಿನ ಬೋಟು ಮುಳುಗಡೆಯಾಗಿ ಸುಮಾರು 15 ಲಕ್ಷಗಳಿಗೂ ಹೆಚ್ಚಿನ ಹಾನಿ ಸಂಭವಿಸಿತ್ತು.
ಇದೀಗ ಇನ್ನೊಂದು ಬೋಟು ಮುಳಗಡೆಯಾಗಿರುವುದು ತುರ್ತು ಹೂಳೆತ್ತುವ ಅಗತ್ಯತೆಯನ್ನು ತೋರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !