ಜಕ್ಕೂರು ಏರ್‌ಪೋರ್ಟ್‌ನಲ್ಲಿ 100 ಯುವಕರಿಗೆ ಪೈಲಟ್ ತರಬೇತಿಗೆ ಯೋಜನೆ: ನಾರಾಯಣಗೌಡ

ದಿಗಂತ ವರದಿ ಆದಿ ಚುಂಚನಗಿರಿ :

ಬೆಂಗಳೂರಿನ ಜಕ್ಕೂರು ಏರ್‌ಪೋರ್ಟ್‌ನಲ್ಲಿ 100 ಯುವಕರಿಗೆ ಪೈಲಟ್ ತರಬೇತಿ ಕೊಡಿಸಲು ಯೋಜನೆ ರೂಪಿಸಿರುವುದಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಘೋಷಿಸಿದರು.
ಆದಿ ಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮೂರು ವರ್ಷದಿಂದ ಜಕ್ಕೂರು ಏರ್‌ಪೋರ್ಟ್ ಕಾರ್ಯಾಚರಣೆ ಇಲ್ಲದೆ ಸ್ಥಗಿತಗೊಂಡಿತ್ತು. ಅದಕ್ಕೆ ಮತ್ತೆ ಚಾಲನೆಗೊಳಿಸಲಾಗಿದೆ. ಮುಂದಿನ ಎಂಟು ತಿಂಗಳಲ್ಲಿ 100 ಯುವಕರಿಗೆ ಪೈಲಟ್ ತರಬೇತಿ ಕೊಡಿಸುವುದಾಗಿ ಭರವಸೆ ನೀಡಿದರು.
2024ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನ್ನು ಗಮನದಲ್ಲಿಟ್ಟುಕೊಂಡು ಜಿಂದಾಲ್ ಸೇರಿದಂತೆ ವಿವಿಧ ಕಂಪನಿಗಳ ಸಹಯೋಗದಲ್ಲಿ 75 ಮಕ್ಕಳನ್ನು ದತ್ತು ಪಡೆದು ತರಬೇತಿ ನೀಡಲಾಗುತ್ತಿದೆ. ಅವರೆಲ್ಲರಿಗೂ ಕ್ರೀಡೆಯಲ್ಲಿ ಉತ್ತಮ ತರಬೇತಿ ನೀಡುವುದರ ಮೂಲಕ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಸಾಧನೆ ಮಾಡುವುದಕ್ಕೆ ಸ್ಫೂರ್ತಿ, ಪ್ರೋತ್ಸಾಹ ತುಂಬಲಾಗುವುದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಶೀಘ್ರದಲ್ಲೇ ರಾಜ್ಯದಲ್ಲಿ ಖೇಲೋ ಇಂಡಿಯಾ ಕ್ರೀಡಾ ವಿಶ್ವವಿದ್ಯಾನಿಲಯ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇದನ್ನು ಜೈನ್ ವಿವಿ ಮತ್ತು ಕಂಠೀರವ ಸ್ಟೇಡಿಯಂನಲ್ಲಿ ಆರಂಭ ಮಾಡಲಾಗುವುದು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬರಲಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!