ಹೊಸ ದಿಗಂತ ವರದಿ , ಕಲಬುರಗಿ:
ನೃಪತುಂಗನ ನಾಡು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಾಂಡಾ ನಿವಾಸಿಗಳಿಗೆ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಶಾಶ್ವತ ಸೂರಿನ ರೂಪದಲ್ಲಿ ಏಕಕಾಲದಲ್ಲಿ 52,072 ಜನರಿಗೆ ಗಿನ್ನೀಸ್ ದಾಖಲೆಯ ಪ್ರಮಾಣದಲ್ಲಿ ಹಕ್ಕು ಪತ್ರ ವಿತರಿಸಿದರು.
ಮಳಖೇಡ್ ಹೊರವಲಯದ 150 ಎಕರೆ ಪ್ರದೇಶದಲ್ಲಿ ಕಂದಾಯ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತದಿಂದ
ಆಯೋಜಿಸಿದ ‘ಅಲೆಮಾರಿ ಸೂರಿನಿಂದ ಸುಸ್ಥಿರ ಊರಿನೆಡೆಗೆ ಕಾರ್ಯಕ್ರಮ’ದಲ್ಲಿ ಬಂಜಾರ್ ನಗಾರ್ ವಾದನ ಸುಮಾರು 40
ಸೆಕೆಂಡ್ ಬಾರಿಸುವುದರ ಜೊತೆಗೆ ರಿಮೋಟ್ ಬಟನ್ ಪ್ರೆಸ್ ಮಾಡುವ ಮೂಲಕ ಏಕಕಾಲದಲ್ಲಿ 52 ಸಾವಿರ ಜನರಿಗೆ ಹಕ್ಕು
ಪತ್ರವನ್ನು ವಿತರಿಸಿದರು.
ನಗಾರ್ ಬಾರಿಸುತ್ತಿದ್ದಂತೆ ವೇದಿಕೆ ಮುಂದಿನ ಜನಸೂಮಹ ಚಪ್ಪಾಳೆ ತಟ್ಟುವ ಮೂಲಕ ನಗಾರಿಗೆ ಸಾಥ್ ನೀಡಿದರು. ನಂತರ ಪ್ರಧಾನಿಗಳು ಸಾಂಕೇತಿಕವಾಗಿ 5 ಜನ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದಲ್ಲದೆ ಅವರೊಂದಿಗೆ ಕುಶಲೋಪರಿಯಾಗಿ ಮಾತನಾಡಿಸಿದರು.
ಜನರತ್ತ ಕೈಬೀಸುತ್ತಲೆ ವೇದಿಕೆಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಂಬಾಣಿ ಸಮುದಾಯದ ಗೋರ ಬಂಜಾರಾ ಶಾಲು ಹಾಕಿ ಸ್ವಾಗತ ಕೋರಿದರು. ಕಂದಾಯ ಸಚಿವ ಆರ್.ಅಶೋಕ ಅವರು ಖ್ಯಾತ ಅಂತರಾಷ್ಟ್ರೀಯ ಕಲಾವಿದ ಜಿ.ಎಸ್.ಖಂಡೇರಾವವ ರಚಿಸಿದ 12ನೇ ಶತಮಾನದಲ್ಲಿಯೇ ವಿಶ್ವಕ್ಕೆ
ಸಂಸತ್ತು ಪರಿಚಯಿಸಿದ ಬಸವಾದಿ ಶರಣರಾದ ಅಲ್ಲಮಪ್ರಭು, ಮಾತೆ ಅಕ್ಕಮಹಾದೇವಿ ಅವರಿದ್ದ ಅನುಭವ ಮಂಟಪದ ಕಲಾಕೃತಿಯನ್ನು ಪ್ರಧಾನಮಂತ್ರಿಗಳನ್ನು ಸ್ಮರಣಿಕೆಯಾಗಿ ನೀಡಿ ಸತ್ಕರಿಸಿದರು.