Sunday, February 5, 2023

Latest Posts

 ಅಯೋಧ್ಯೆಯಲ್ಲಿ ಯೋಗಿ ಜೊತೆಗೆ ದೀಪಾವಳಿ ಆಚರಿಸಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇನ್ನೊಂದು ವಾರದಲ್ಲಿ ಇಡೀ ಭಾರತದೇಶ ದೀಪಗಳ ಹಬ್ಬ ದೀಪಾವಳಿಯ ಸಂಭ್ರಮಾಚರಣೆಗಳಲ್ಲಿ ಮಿಂದೇಳಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀಪೋತ್ಸವ ಆಚರಣೆಗಾಗಿ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಅವರೊಂದಿಗೆ ಅಯೋಧ್ಯೆಯಲ್ಲಿ ಹಬ್ಬದ ಸಂಭ್ರಮ ಆಚರಿಸಲಿರುವ ಮೋದಿ, ಬಳಿಕ ರಾಮಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸುವ ನಿರೀಕ್ಷೆಯಿದೆ.
ಮುಂದಿನ ಭಾನುವಾರ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ, ಪ್ರಧಾನಿ ಮೋದಿ ಅವರು ಭವ್ಯವಾದ ಮಂದಿರ ನಿರ್ಮಾಣವಾಗುತ್ತಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ಪರಿಶೀಲಿಸುವ ನಿರೀಕ್ಷೆಯಿದೆ. ಆ ಬಳಿಕ ರಾಮ್ ಕಥಾ ಪಾರ್ಕ್‌ಗೆ ಭೇಟಿ ನೀಡುವ ಮಾಹಿತಿ ಲಭ್ಯವಾಗಿದೆ.
ಬುಧವಾರ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪೋತ್ಸವ ಆಚರಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಪವಿತ್ರ ನಗರಕ್ಕೆ ಭೇಟಿ ನೀಡಲಿದ್ದಾರೆ. ಇದು ಸುಮಾರು ಒಂದು ತಿಂಗಳ ಅವಧಿಯಲ್ಲಿ ಅಯೋಧ್ಯೆಗೆ ಆದಿತ್ಯನಾಥ್ ಅವರ ನಾಲ್ಕನೇ ಭೇಟಿಯಾಗಲಿದೆ.
ರಾಮಮಂದಿರ ನಿರ್ಮಾಣ ಸಮಿತಿಯ (ಆರ್‌ಎಂಸಿಸಿ) ಎರಡು ದಿನಗಳ ಪರಿಶೀಲನಾ ಸಭೆ ಸೋಮವಾರ ಅಯೋಧ್ಯೆಯಲ್ಲಿ ಮುಕ್ತಾಯಗೊಂಡಿದ್ದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರು ರಾಮಮಂದಿರದ ಸುಮಾರು 50 ಪ್ರತಿಶತದಷ್ಟು ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಬೆನ್ನಲ್ಲೇ ಪ್ರಧಾನಿ ಭೇಟಿ ಮಹತ್ವದ್ದಾಗಿದೆ.
ಪ್ರಧಾನಿಯವರು ಸರಯೂ ನದಿಯಲ್ಲಿ ದೀಪಾರತಿಯಲ್ಲಿ ಪಾಲ್ಗೊಳ್ಳುವುದಲ್ಲೂ ಸಹ ಅಯೋಧ್ಯೆ ಸಾಕ್ಷಿಯಾಗಬಹುದು. ಈ ಸಂದರ್ಭದಲ್ಲಿ ಹಸಿರು ಡಿಜಿಟಲ್ ಪಟಾಕಿಗಳನ್ನು ಯೋಜಿಸಲಾಗಿದೆ. ಭಾನುವಾರದಿಂದ ಪ್ರಾರಂಭವಾಗುವ ಮೂರು ದಿನಗಳ ದೀಪೋತ್ಸವ ಆಚರಣೆಯಲ್ಲಿ, ರಷ್ಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ಫಿಜಿ ಕಲಾವಿದರಿಂದ ರಾಮಲೀಲಾ ಪ್ರದರ್ಶನಗಳನ್ನು ಏರ್ಪಡಿಸಿರುವುದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಸರಯೂ ನದಿಯ ದಂಡೆಯನ್ನು 17 ಲಕ್ಷ ದೀವಟಿಗೆಗಳು ಬೆಳಗಲಿರುವುದು ದಾಖಲೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!