ಪುಟಿನ್‌ – ಝೆಲೆನ್ಸ್ಕಿ ಜೊತೆಗೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ, ಏನೆಲ್ಲಾ ವಿಚಾರಗಳು ಚರ್ಚೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಇಂದು ಮುಂಜಾನೆ ಮಾತನಾಡಿದರು.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಸಂಘರ್ಷದ ಪರಿಸ್ಥಿತಿ ಹಾಗೂ ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ವಿವರವಾಗಿ ಪ್ರಧಾನಿಗೆ ವಿವರಿಸಿದರು. ನಡೆಯುತ್ತಿರುವ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಮಾನವೀಯ ಬಿಕ್ಕಟ್ಟಿನ ಬಗ್ಗೆ ಪ್ರಧಾನಮಂತ್ರಿಯವರು ತೀವ್ರ ಕಳವಳ ವ್ಯಕ್ತಪಡಿಸಿದರು. ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂಬ ತಮ್ಮ ಕರೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಭಾರತವು ಯಾವಾಗಲೂ ಸಮಸ್ಯೆಗಳ ಶಾಂತಿಯುತ ಪರಿಹಾರಕ್ಕಾಗಿ ಹಾಗೂ ಉಭಯ ಪಕ್ಷಗಳ ನಡುವೆ ನೇರ ಸಂವಾದಕ್ಕಾಗಿ ನಿಂತಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ಉಕ್ರೇನ್ ಅಧಿಕಾರಿಗಳಿಗೆ ಕೃತಜ್ಞತೆ:
ಉಕ್ರೇನ್‌ನಿಂದ 20,000ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಉಕ್ರೇನ್ ಅಧಿಕಾರಿಗಳಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು. ಉಕ್ರೇನ್‌ನಲ್ಲಿ ಇನ್ನೂ ಉಳಿದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಪ್ರಧಾನಿ ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಅವರ ತ್ವರಿತ ಹಾಗೂ ಸುರಕ್ಷಿತ ಸ್ಥಳಾಂತರದ ಅಗತ್ಯವನ್ನು ಒತ್ತಿ ಹೇಳಿದರು.

ಪುಟಿನ್‌ ಜೊತೆಗೆ ಮತುಕತೆ: 
ಸೋಮವಾರ ಮಧ್ಯಾಹ್ನದ ನಂತರ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆಗೆ ಚರ್ಚೆ ನಡೆಸಲಿದ್ದು, ಮಹತ್ವದ ವಿಚಾರಗಳ ಕುರಿತು ಸಂವಾದ ನಡೆಯಲಿದೆ ಎಂದು ತಿಳಿದುಬಂದಿದೆ.
ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಬಲವಾಗಿ ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ನಡೆದ ಮತಸಂಗ್ರಹದಲ್ಲಿ ಭಾರತ ಮತದಾನ ಮಾಡದೇ ತಟಸ್ಥ ನೀತಿ ಅನುಸರಿಸಿತ್ತು. ಇದೀಗ ಯುದ್ಧರಂಗದಲ್ಲಿನ ಎರಡೂ ಪಕ್ಷಗಳ ನಾಯಕರು ಮೋದಿಯವರೊಂದಿಗೆ ಮಾತುಕತೆಗೆ ಮುಂದಾಗಿದ್ದು, ಭಾರತದ ಮುಂದಿನ ನಡೆಯೇನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಉಭಯ ದೇಶಗಳ ನಡುವೆ ಶಾಂತಿಯುತ ಮಾತುಕತೆಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುವ ಭಾರತದ ಇಚ್ಛೆಯನ್ನು ಮೋದಿ ಪುನರುಚ್ಚರಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!