ಕೊರೋನಾದಲ್ಲಿ ಪಾಲಕರನ್ನು ಕಳೆದುಕೊಂಡವರ ನೆರವಿಗೆ ಪಿಎಂ ಕೇರ್ಸ್- ಕಲಬುರಗಿಯಲ್ಲೊಂದು ಝಲಕು

ಹೊಸದಿಗಂತ ವರದಿ ಕಲಬುರಗಿ: 

ಕೊರೊನಾ ಸಮಯದಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿ ಜೀವನ ನಿರ್ವಹಿಸುತ್ತಿರುವ ಮಕ್ಕಳ ಪಾಲಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ʻಪಿಎಂ ಕೇರ್‌ʼ ಯೋಜನೆಯಡಿ ಮಕ್ಕಳ ಸಹಾಯಕ್ಕೆ ನಿಂತಿದೆ. ಈ ಯೋಜನೆಯಡಿಯಲ್ಲಿ ಇಂದು ಮಕ್ಕಳಿಗೆ ಪಿಎಂ ಸಹಾಯ ನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಇದರ ಭಾಗವಾಗಿ ಇತ್ತ ಕಲಬುರಗಿಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದ ಅಂಗವಾಗಿ ಕೋವಿಡ್ ನಿಂದ ಪೋಷಕರನ್ನು ಕಳೆದಕೊಂಡ ಕಲಬುರಗಿಯ ಮಕ್ತಂಪೂರ ಪ್ರದೇಶದ 10 ವರ್ಷದ ತನುಷ್ ವಿ.ಎಸ್, ಕಲಬುರಗಿಯ ಶಾಂತಿ ನಗರದ 14 ವರ್ಷದ ಮಾನಸಿ ಹಾಗೂ ಆಳಂದ ತಾಲೂಕಿನ ಹೊದಲೂರು ಗ್ರಾಮದ 17 ವರ್ಷದ ಗಣೇಶ ಎಂಬ ಮಕ್ಕಳಿಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಅಂಚೆ ಇಲಾಖೆಯ ಪಾಸ್ ಬುಕ್, ಮಕ್ಕಳಿಗೆ ಪ್ರಧಾನಮಂತ್ರಿಗಳು ಬರೆದ ಪತ್ರ, ಆಯುಷ್ಮಾನ್ ಆರೋಗ್ಯ ಕಾರ್ಡ್, ಪಿ.ಎಂ.ಕೇರ್ ಸರ್ಟಿಫಿಕೇಟ್ ಒಳಗೊಂಡ ಕಿಟ್ ವಿತರಿಸಿ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಮಕ್ಕಳಿಗೆ ಶುಭ ಹಾರೈಸಿದರು. ಈ ಮೂವರು ಮಕ್ಕಳು ಕೊರೊನಾ ಸಮಯದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ.

ʻಪಿಎಂ ಕೇರ್‌ʼ ಬಗ್ಗೆ ಪ್ರಧಾನಿ ವಿಶ್ಲೇಷಣೆ

ಹೆತ್ತ ತಂದೆ-ತಾಯಿಯ ಪ್ರೀತಿ ಮತ್ತು ಕಾಳಜಿ ಯಾರಿಂದಲೂ ನೀಡಲು ಸಾಧ್ಯವಿಲ್ಲವಾದರೂ ತಾಯಿ ಭಾರತಾಂಬೆ ನಿಮ್ಮೊಂದಿಗಿದ್ದಾಳೆ. ಪಿ.ಎಂ. ಕೇರ್ ಯೋಜನೆ ಮೂಲಕ ನಿಮ್ಮ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಕೋವಿಡ್‍ನಿಂದ ಹೆತ್ತವರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳೊಂದಿಗೆ ದೆಹಲಿಯಿಂದ ವಿಡಿಯೋ ಕಾನ್ಪೆರೆನ್ಸ್ ಮೂಲಕ ಮೋದಿ ಸಂವಾದ ನಡೆಸಿದರು. ಸಂಕಷ್ಟದ ದಿನಗಳನ್ನು ಎದುರಿಸಿ ಬಂದಿರುವ ನಿಮ್ಮ ಧೈರ್ಯಕ್ಕೆ ನಾನು ಸೆಲ್ಯೂಟ್ ಮಾಡುವೆ ಎಂದ ನರೇಂದ್ರ ಮೋದಿ, ನಿಮ್ಮ ಕನಸನ್ನು ಸಾಕಾರಗೊಳಿಸುವ ಪಿ.ಎಂ.ಕೇರ್ ಸಣ್ಣ ಪ್ರಯತ್ನವಾಗಿದೆ. ಇಡೀ ದೇಶ ನಿಮ್ಮೊಂದಿಗಿದೆ ಎಂದು ಮೋದಿ ಮಕ್ಕಳಿಗೆ ಅಭಯ ನೀಡಿದರು.

ಈಗಾಗಲೇ ಮಕ್ಕಳ ಮನೆ ಹತ್ತಿರವಿರುವ ಸರ್ಕಾರಿ ಅಥವಾ ಖಾಸಗಿ ಶಾಲೆಗೆ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಶಿಕ್ಷಣಕ್ಕೆ ಬೇಕಾದ ಪುಸ್ತಕ, ಬಟ್ಟೆ ಇನ್ನಿತರ ಖರ್ಚು ಸಹ ಸರ್ಕಾರ ನೋಡಿಕೊಳ್ಳಲಿದೆ. ಉನ್ನತ ಶಿಕ್ಷಣದ ಜೊತೆಗೆ ಶೈಕ್ಷಣಿಕ ಸಾಲಕ್ಕೂ ಪಿ.ಎಂ.ಕೇರ್ ನೆರವಾಗಲಿದೆ. 5 ಲಕ್ಷ ರೂ. ವರೆಗಿನ ಉಚಿತ ಚಿಕಿತ್ಸೆಯ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಮಕ್ಕಳ ಹೆಸರ ಮೇಲೆ ಅಂಚೆ ಬ್ಯಾಂಕ್‍ನಲ್ಲಿ ಇಡಲಾಗುವ ಇಡಗಂಟಿನ ಮೇಲೆ ಲಭ್ಯವಾಗುವ ಬಡ್ಡಿಯನ್ನು 18 ರಿಂದ 23 ವಯಸ್ಸಿನ ಅವಧಿಯಲ್ಲಿ ಪ್ರತಿ ತಿಂಗಳ ಸ್ಟೇಫಂಡ್ ರೂಪದಲ್ಲಿ ಖರ್ಚಿಗೆ ಹಣ ನೀಡಲಾಗುವುದು. 23 ವರ್ಷದ ನಂತರ ಮುಂದಿನ ಭವಿಷ್ಯಕ್ಕೆ 10 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಇದಲ್ಲದೆ ಸ್ಪಾನ್ಶರಶಿಪ್ ಯೋಜನೆಯಡಿ ಮಾಹೆಯಾನ 2000 ರೂ. ಆರ್ಥಿಕ ಸೌಲಭ್ಯ 2021-22ನೇ ಸಾಲಿನಿಂದ ಜಾರಿಗೊಳಿಸಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಗರಿಷ್ಠ 3 ವರ್ಷ ಅಥವಾ 18 ವರ್ಷದವರೆಗೆ ಈ ಯೋಜನೆ ಉಪಯೋಗ ಸಿಗಲಿದೆ ಎಂದು ಪಿ.ಎಂ.ಕೇರ್ ಯೋಜನೆಗಳ ಕುರಿತು ವಿವರಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!