ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಹಾವಳಿ: ವ್ಯಾಘ್ರನ ಆರ್ಭಟಕ್ಕೆ ಭಯಭೀತರಾದ ಜನ

ಹೊಸದಿಗಂತ ವರದಿ, ಮಡಿಕೇರಿ:
ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರಿದಿದ್ದು, ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಹುಲ್ಲಿನ ದಾಳಿಗೆ‌ ಮತ್ತೊಂದು ಹಸು ಬಲಿಯಾಗಿದೆ.
ಬಿ.ಶೆಟ್ಟಿಗೇರಿ ಗ್ರಾಮದ ಕೃಷಿಕ ಕಾಳೇಂಗಡ ಅಜಿತ್ ಎಂಬವರಿಗೆ ಸೇರಿದ ಹಸುವನ್ನು‌ ಶನಿವಾರ ರಾತ್ರಿ ಹುಲಿ ಕೊಂದು ಹಾಕಿದ್ದು, ಆ ಭಾಗದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಬ್ರಹ್ಮಗಿರಿ ವನ್ಯಜೀವಿ ವಲಯ ಹಾಗೂ ಪೊನ್ನಂಪೇಟೆ ಮೀಸಲು ಅರಣ್ಯ ವ್ಯಾಪ್ತಿಯಿಂದ ನಿರಂತರ ಹುಲಿಗಳು ಬಿ.ಶೆಟ್ಟಿಗೇರಿ ಗ್ರಾಮಕ್ಕೆ ನುಸುಳುತ್ತಿದ್ದು, ರೈತಾಪಿ ವರ್ಗ ತೀವ್ರ ಆತಂಕಕ್ಕೆ ಒಳಗಾಗಿದೆ ಎಂದು ಬಿ.ಶೆಟ್ಟಿಗೇರಿ ಗ್ರಾ.ಪಂ.ಸದಸ್ಯ ಕೊಲ್ಲೀರ ಬೋಪಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಲಿ ಸೆರೆಗೆ ಬೋನನ್ನು ಇರಿಸಲಾಗಿದೆ.ಎ ಲ್ಲೆಡೆ ಇಲಾಖೆ ಕೂಂಬಿಂಗ್ ಮೂಲಕ ಹುಲಿ ಸೆರೆಗೆ‌ ಮುಂದಾಗಬೇಕು. ಗ್ರಾಮಸ್ಥರು, ಕೂಲಿ ಕಾರ್ಮಿಕ ವರ್ಗ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಗಲು ಹೊತ್ತಿನಲ್ಲೇ ಓಡಾಡಲು ಭಯ ಪಡುವಂತಾಗಿದ್ದು, ಹುಲಿಯನ್ನು ಶೀಘ್ರ ಸೆರೆ ಹಿಡಿಯಬೇಕು; ಇಲ್ಲವೇ ಪೊನ್ನಂಪೇಟೆ ವಲಯಾರಣ್ಯ ಕಚೇರಿ ಎದುರು ಕೊಡಗು ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ನೇತೃದ್ವಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಬಿ.ಶೆಟ್ಟಿಗೇರಿ ಗ್ರಾಮದ ರೈತ ಸಂಘದ ಅಧ್ಯಕ್ಷ ಚೇರಂಡ ಜಗನ್ ಅವರು ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯವೇ ಹುಲಿ ಉಪಟಳ ಎಲ್ಲೆಡೆ ಅಧಿಕಗೊಳ್ಳಲು ಕಾರಣ. ಹುಲಿ ದಾಳಿಯಿಂದ ಹಸು ಕಳೆದುಕೊಂಡಿರುವ ರೈತ ಕುಟುಂಬಕ್ಕೆ ಶೀಘ್ರ ಪರಿಹಾರ ಒದಗಿಸಬೇಕು. ಹುಲಿ ಸೆರೆ ವಿಳಂಬ ಮಾಡಿದಲ್ಲಿ ಬಿ.ಶೆಟ್ಟಿಗೇರಿಯ ರೈತರು, ಗ್ರಾಮಸ್ಥರನ್ನು ಸಂಘಟಿಸಿ ಪೊನ್ನಂಪೇಟೆ ಅರಣ್ಯ ಇಲಾಖೆ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!