ಜಿ-20 ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಇಂಡೋನೇಷ್ಯಕ್ಕೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಡೋನೇಷ್ಯಾ ದೇಶದ ಬಾಲಿಯಲ್ಲಿ ನವೆಂಬರ್ 15- 16 ರಂದು ನಡೆಯಲಿರುವ 17ನೇ ಜಿ20 ಶೃಂಗಸಭೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಈ ವೇಳೆ ಜಾಗತಿಕ ಬೆಳವಣಿಗೆ, ಆಹಾರ ಮತ್ತು ಇಂಧನ ಭದ್ರತೆ, ಪರಿಸರ, ಆರೋಗ್ಯ ಮತ್ತು ಡಿಜಿಟಲ್ ರೂಪಾಂತರದಂತಹ ಜಾಗತಿಕ ಕಾಳಜಿಯ ಪ್ರಮುಖ ವಿಷಯಗಳ ಕುರಿತು ಪ್ರಧಾನಿಯವರು ಪ್ರಮುಖ G20 ನಾಯಕರೊಂದಿಗೆ ವ್ಯಾಪಕವಾದ ಚರ್ಚೆಗಳನ್ನು ನಡೆಸಲಿದ್ದಾರೆ.
ಪ್ರಧಾನಿ ಮೋದಿ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಪ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಆ ದೇಶಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ನವೆಂಬರ್ 15ರಂದು ನಡೆಯಲಿರುವ ಸ್ವಾಗತ ಸಮಾರಂಭದಲ್ಲಿ ಬಾಲಿಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಾಲಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ಅವರು G 20 ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಲಿದ್ದಾರೆ. ಭಾರತವು 1ನೇ ಡಿಸೆಂಬರ್ 2022 ರಿಂದ ಅಧಿಕೃತವಾಗಿ G 20 ರಾಷ್ಟ್ರಗಳ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ G 20 ಶೃಂಗಸಭೆಗೆ ಉಳಿದ ದೇಶಗಳಿಗೆ ಪ್ರಧಾನಿ ಈ ವೇಳೆ ಆಹ್ವಾನ ನೀಡಲಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿ, ʼG20 ಶೃಂಗಸಭೆಯಲ್ಲಿ ಭಾರತದ ಸಾಧನೆಗಳು ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತದ ಅಚಲ ಬದ್ಧತೆಯನ್ನು ಪ್ರಸ್ತಾಪಿಸಲಿದ್ದೇನೆ. ಭಾರತದ G 20 ನಾಯಕತ್ವವು “ವಸುಧೈವ ಕುಟುಂಬಕಂ” ಅಥವಾ “ಒಂದು ಭೂಮಿ- ಒಂದು ಕುಟುಂಬ- ಒಂದು ಭವಿಷ್ಯ” ಎಂಬ ಸಂದೇಶದಡಿ ನೆಲೆಗೊಂಡಿದೆ. ಇದು ಸಮಾನ ಬೆಳವಣಿಗೆ ಮತ್ತು ಎಲ್ಲರಿಗೂ ಭವಿಷ್ಯದ ಹಂಚಿಕೆಯ ಸಂದೇಶವನ್ನು ಒತ್ತಿಹೇಳುತ್ತದೆʼ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!