August 28, 2026
Friday, August 28, 2026
spot_img

ಪೋಕ್ಸೋ ಪ್ರಕರಣ: ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ್ ಪುತ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಬಂಡಿ ಭಗೀರಥ್ ಇಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಭಗೀರಥ್ ವಿರುದ್ಧ ಪೊಲೀಸರು ಲುಕ್-ಔಟ್ ನೊಟೀಸ್ ಜಾರಿಗೊಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್, ‘ಕಾನೂನಿನ ಮೇಲಿನ ಗೌರವದಿಂದಾಗಿ ಪುತ್ರ ಭಗೀರಥ್‌ನನ್ನು ತನಿಖೆಗಾಗಿ ವಕೀಲರ ಮೂಲಕ ಪೊಲೀಸರಿಗೆ ಒಪ್ಪಿಸಿದ್ದೇನೆ. ಕಾನೂನಿನ ಮುಂದೆ ನನ್ನ ಮಗನಾಗಲಿ ಅಥವಾ ಸಾಮಾನ್ಯ ನಾಗರಿಕನಾಗಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರೂ ಕಾನೂನನ್ನು ಪಾಲಿಸಲೇಬೇಕು ಎಂದು ಹೇಳಿದ್ದಾರೆ.

ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾನೆ. ದೂರು ದಾಖಲಾದ ತಕ್ಷಣವೇ ಪೊಲೀಸರಿಗೆ ಒಪ್ಪಿಸಲು ನಾವು ನಿರ್ಧರಿಸಿದ್ದೆವು. ಆದರೆ ವಕೀಲರನ್ನು ಸಂಪರ್ಕಿಸಿದಾಗ, ನಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ತೋರಿಸಿದಾಗ ಈ ಕೇಸ್ ವಜಾಗೊಳ್ಳುತ್ತದೆ. ಬೇಲ್ ಸಿಗುತ್ತದೆ ಎಂದು ಅವರು ಹೇಳಿದ್ದರಿಂದ ಶರಣಾಗತಿ ಪ್ರಕ್ರಿಯೆ ತಡವಾಯಿತು. ಕೋರ್ಟ್ ಆದೇಶ ಸೋಮವಾರ ಬರುವ ನಿರೀಕ್ಷೆ ಇದ್ದರೂ, ತನಿಖೆಗೆ ವಿಳಂಬವಾಗಬಾರದು ಎಂದು ನಾನೇ ಖುದ್ದಾಗಿ ಆತನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದೇನೆ. ನಮಗೆ ನ್ಯಾಯಾಂಗದ ಮೇಲೆ ಪೂರ್ಣ ನಂಬಿಕೆಯಿದೆ ಎಂದು ತಿಳಿಸಿದರು.

ಅತ್ತ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಭಗೀರಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್, ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿತ್ತು.

17 ವರ್ಷದ ಅಪ್ರಾಪ್ತ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !