September 20, 2026
Sunday, September 20, 2026
spot_img

ವಿದೇಶಿ ಮಹಿಳೆಗೆ ಸೀರೆ ಉಡಿಸಿದ ಪೊಲೀಸ್ ಸಿಬ್ಬಂದಿ: ನೆಟ್ಟಿಗರ ಮನಗೆದ್ದಿತು ತಾಜ್ ಮಹಲ್‌ನಲ್ಲಿ ಭಾರತೀಯ ಆತಿಥ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ವಿಶ್ವ ಪ್ರಸಿದ್ಧ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿದ್ದ ಅರ್ಜೆಂಟೀನಾದ ಮಹಿಳಾ ಪ್ರವಾಸಿಗೆಯೊಬ್ಬರ ಸೀರೆ ಧರಿಸುವ ಕನಸನ್ನು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಸಾಕಾರಗೊಳಿಸಿದ ಹೃದಯಸ್ಪರ್ಶಿ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.


ತಾಜ್ ಮಹಲ್‌ನಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೆಬಲ್ ಗುಡ್ಡಿ ದೇವಿ ಎಂಬವರು ವಿದೇಶಿ ಮಹಿಳೆ ಸೀರೆ ಧರಿಸಲು ಪರದಾಡುತ್ತಿರುವುದನ್ನು ಗಮನಿಸಿ, ಯಾವುದೇ ಮುಜುಗರವಿಲ್ಲದೆ ಸ್ವತಃ ಸೀರೆ ಉಡಿಸಿ ಸಹಾಯ ಮಾಡಿದರು. ಸಾಂಪ್ರದಾಯಿಕ ಭಾರತೀಯ ಉಡುಪಿನಲ್ಲಿ ಮಿಂಚಿದ ಅರ್ಜೆಂಟೀನಾ ಮಹಿಳೆ ಸಂತಸದಿಂದ ಕಾನ್‌ಸ್ಟೆಬಲ್‌ಗೆ ಧನ್ಯವಾದ ತಿಳಿಸಿ, ಅವರೊಂದಿಗೆ ಛಾಯಾಚಿತ್ರಕ್ಕೂ ಪೋಸ್ ನೀಡಿದರು.


ಈ ವಿಡಿಯೊವನ್ನು ಉತ್ತರ ಪ್ರದೇಶ ಪೊಲೀಸರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿಯ ಮಾನವೀಯತೆ, ಆತಿಥ್ಯ ಮತ್ತು ಸೇವಾ ಮನೋಭಾವವನ್ನು ಶ್ಲಾಘಿಸಿದ್ದಾರೆ.


ತಾಜ್ ಮಹಲ್‌ಗೆ ಭೇಟಿ ನೀಡುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಭದ್ರತೆಯ ಜೊತೆಗೆ ಅಗತ್ಯವಿದ್ದಾಗ ಮಾನವೀಯ ನೆರವು ನೀಡುವಂತೆ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಈ ಘಟನೆ ಭಾರತದ ‘ಅತಿಥಿ ದೇವೋ ಭವ’ ಸಂಸ್ಕೃತಿಯ ಜೀವಂತ ಉದಾಹರಣೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ತಾಜ್ ಮಹಲ್‌ ಎದುರು ಸೀರೆ ಅಥವಾ ಲೆಹೆಂಗಾ ಧರಿಸಿ ಫೋಟೊಶೂಟ್ ಮಾಡಿಸಿಕೊಳ್ಳುವುದು ವಿದೇಶಿ ಮಹಿಳಾ ಪ್ರವಾಸಿಗರಲ್ಲಿ ಜನಪ್ರಿಯವಾಗಿದ್ದು, ಆಗ್ರಾದಲ್ಲಿ ಸೀರೆ ಬಾಡಿಗೆ ಹಾಗೂ ಡ್ರೇಪಿಂಗ್ ಸೇವೆ ನೀಡುವ ಸಣ್ಣ ಉದ್ಯಮಗಳಿಗೂ ಇದರಿಂದ ಉತ್ತೇಜನ ಸಿಕ್ಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !