ಹಾವೇರಿಯಲ್ಲಿ ನಡೆಯೋದು ರಾಜಕೀಯ ಸಮ್ಮೇಳನ: ಹೆಚ್.ವಿಶ್ವನಾಥ್ ಕಿಡಿ

ಹೊಸದಿಗಂತ ವರದಿ ಮಡಿಕೇರಿ:

ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಿಗರ ಸಮ್ಮೇಳನವಲ್ಲ ಬದಲಾಗಿ ಇದು ‘ಆಲ್ ಪಾರ್ಟಿ ಲೀಡರ್ಸ್ ಅಸೋಸಿಯೇಷನ್’ನ ರಾಜಕೀಯ ಸಮ್ಮೇಳನ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಸರ್ಕಾರ 20 ಕೋಟಿ ರೂ.ಗಳ ಬೃಹತ್ ಮೊತ್ತದ ಅನುದಾನವನ್ನು ನೀಡಿದೆ. ಆದರೆ ಸಮ್ಮೇಳನದ ಕುರಿತು ಪೂರ್ವಭಾವಿ ಸಭೆ ನಡೆಸಿಲ್ಲ. ಮಾರ್ಗಸೂಚಿಯನ್ನೂ ನೀಡಿಲ್ಲ. ಊಟ, ತಿಂಡಿ, ಬಾಜಾಬಜಂತ್ರಿ, ಏಲಕ್ಕಿ ಮಾಲೆ ಇವಿಷ್ಟೇ ಸಮ್ಮೇಳನವೇ ಎಂದು ಪ್ರಶ್ನಿಸಿದರು.

ಸಮ್ಮೇಳನದಲ್ಲಿ ಸುಮಾರು 85 ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಆದರೆ ಈ ಪಟ್ಟಿಯಲ್ಲಿ ಒಬ್ಬರೇ ಒಬ್ಬರು ಮುಸ್ಲಿಮರಿಲ್ಲ. ಜಾನಪದ ವಿದ್ವಾಂಸ ಡಾ.ಕರೀಂ ಖಾನ್ ಸಹಿತ ಅಖಿಲ ಭಾರತ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಉನ್ನತ ಪ್ರಶಸ್ತಿಗಳನ್ನು ಪಡೆದವರನ್ನು ಕೂಡಾ ಸನ್ಮಾನಿತರ ಪಟ್ಟಿಯಲ್ಲಿ ಸೇರಿಸಿಲ್ಲ. ಹಿಂದಿನ ಸಮ್ಮೇಳನಗಳಲ್ಲಿ ದಲಿತ ಸಮಾವೇಶ ನಡೆಯುತ್ತಿತ್ತು. ಆದರೆ ಈ ಬಾರಿ ದಮನಿತರ ಸಮಾವೇಶ ಎಂದು ಬದಲಾಯಿಸಲಾಗಿದೆ. ಅಧ್ಯಕ್ಷರಿಗೆ ದಲಿತ ಮತ್ತು ದಮನಿತರ ವ್ಯತ್ಯಾಸ ತಿಳಿದಿಲ್ಲವೇ ಎಂದು ವಿಶ್ವನಾಥ್ ಪ್ರಶ್ನಿಸಿದರು.

ಎಲ್ಲರನ್ನೂ ಒಗ್ಗೂಡಿಸಿ ಕನ್ನಡ ಸಮ್ಮೇಳನ ಮಾಡಬೇಕೇ ಹೊರತು ಜಾತಿ, ಧರ್ಮದ ಸಮ್ಮೇಳನವನ್ನಾಗಿ ಮಾಡುವುದು ಸರಿಯಲ್ಲ. ಶೇ.70 ರಷ್ಟು ಮಂದಿ ಕನ್ನಡ ಮಾತನಾಡುವ ಮುಸ್ಲಿಮರಿದ್ದಾರೆ. 14 ಲಕ್ಷಕ್ಕೂ ಅಧಿಕ ಮಂದಿ ಬ್ಯಾರಿಗಳಿದ್ದಾರೆ, ಕೊಡವ, ತುಳು ಭಾಷಿಕರೂ ಇದ್ದಾರೆ. ಇವರೆಲ್ಲರನ್ನೂ ದೂರವಿಟ್ಟು ಸಮ್ಮೇಳನ ಮಾಡುತ್ತಿದ್ದಾರೆ. ಪುಸ್ತಕ ಪ್ರಾಧಿಕಾರ ಪುಸ್ತಕಗಳನ್ನು ಖರೀದಿ ಮಾಡಿದೆ. ಆದರೆ ಲೇಖಕರಿಗೆ ಸರ್ಕಾರ ಇದುವರೆಗೂ ಹಣ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮೇಳನಕ್ಕೆ ಬಹಿಷ್ಕಾರ: ಕನ್ನಡ ಶಾಲೆಗಳು ಮುಚ್ಚಲ್ಪಡುತ್ತಿವೆ, ರಾಜಕೀಯ ಕ್ಷೇತ್ರ ಮೈಲಿಗೆಯಾಗುತ್ತಿದೆ,ಲ. ಈ ವಿಚಾರಗಳು ಸೇರಿದಂತೆ ಸಾಹಿತ್ಯ, ಶಿಕ್ಷಣ, ಅಕ್ಷರ, ಕನ್ನಡಿಗರ ಪರ ಗಂಭೀರ ಚರ್ಚೆಗೆ ಸಮ್ಮೇಳನ ಸಾಕ್ಷಿಯಾಗುವ ಬದಲು ದಿಕ್ಕು ದಿಸೆಯಿಲ್ಲದಂತಾಗಿದೆ. ಈ ಕಾರಣದಿಂದ ಹಲವರು ಸಮ್ಮೇಳವನ್ನು ಬಹಿಷ್ಕರಿಸಿದ್ದಾರೆ. ನನಗೂ ತೀವ್ರ ಬೇಸರವಾಗಿರುವುದರಿಂದ ಸಮ್ಮೇಳನವನ್ನು ಧಿಕ್ಕರಿಸಿ ಹಾಜರಾಗದೇ ಇರಲು ನಿರ್ಧರಿಸಿರುವುದಾಗಿ ಹೇಳಿದರು.
ಜನತಂತ್ರ ವ್ಯವಸ್ಥೆಯಲ್ಲಿ ಮತದಾರ ಆತ್ಮವಿದ್ದಂತೆ, ಆದರೆ ಆತ್ಮವನ್ನೇ ಕಳವು ಮಾಡುವಂತಹ ಇಂದಿನ ಬೆಳವಣಿಗೆ ಅತ್ಯಂತ ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!