ಬಿಜೆಪಿಯೊಂದಿಗೆ ಕೃಷ್ಣಂ ರಾಜು ಅವರ ರಾಜಕೀಯ ಬೆಳವಣಿಗೆ ಹೇಗಿತ್ತು??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ನಲ್ಲಿ ರೆಬೆಲ್ ಸ್ಟಾರ್ ಆಗಿ ಹೆಸರಾಗಿರುವ ಉಪ್ಪಲಪಾಟಿ ಕೃಷ್ಣಂ ರಾಜು ರಾಜಕೀಯದಲ್ಲೂ ಶ್ರೇಷ್ಠ ನಾಯಕರಾಗಿ ಹೆಸರು ಮಾಡಿದ್ದರು. ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಜೀವನ ಆರಂಭಿಸಿದರೂ ಜನಮನ್ನಣೆ ಗಳಿಸಿದ್ದು ಮಾತ್ರ ಬಿಜೆಪಿಯಲ್ಲಿ. ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಕೃಷ್ಣಂ ರಾಜು ಅವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ರಾಜಕೀಯ ಜೀವನವು 1990 ರಿಂದ ಕಾಂಗ್ರೆಸ್ ಪಕ್ಷದಿಂದ ಪ್ರಾರಂಭವಾಯಿತು, ಬಿಜೆಪಿ, ಪ್ರಜಾರಾಜ್ಯಂ ಪಕ್ಷದಲ್ಲಿ ಮುಂದುವರೆಯಿತು. ಉಪ್ಪಲಪಾಟಿ ಕೃಷ್ಣಂರಾಜ್ ಅವರು ವಿವಾದಗಳಿಂದ ದೂರವಾಗಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದರು.

ಕೃಷ್ಣಂರಾಜು ಅವರು 1990 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1991ರ ಲೋಕಸಭಾ ಚುನಾವಣೆಯಲ್ಲಿ ನರಸಾಪುರಂ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಮೊದಲ ಬಾರಿಗೆ ಸೋಲಿನ ರುಚಿ ಕಂಡ ಕೃಷ್ಣಂ ರಾಜು ಅಂದಿನಿಂದ ಸ್ವಲ್ಪ ಕಾಲ ರಾಜಕೀಯದಿಂದ ದೂರ ಉಳಿದರು.ಮತ್ತೆ ಬಿಜೆಪಿಯ ಆಹ್ವಾನದ ಮೇರೆಗೆ 1998ರ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಕಿನಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಆ ಚುನಾವಣೆಯಲ್ಲಿ ತೆಲುಗುದೇಶಂನ ಅಭ್ಯರ್ಥಿ ತೋಟ ಗೋಪಾಲಕೃಷ್ಣ ವಿರುದ್ಧ ಭಾರಿ ಅಂತರದಿಂದ ಲೋಕಸಭೆ ಪ್ರವೇಶಿಸಿದ್ದರು. 1998 ರಿಂದ 1999 ರವರೆಗೆ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಒಂದು ವರ್ಷದೊಳಗೆ ಉಪಚುನಾವಣೆ ಬಂದಿದ್ದರಿಂದ ಕೃಷ್ಣಮರಾಜು 1999ರಲ್ಲಿ ನರಸಾಪುರದಿಂದ ಸಂಸದರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಕೇಂದ್ರದಲ್ಲೂ ವಾಜಪೇಯಿ ಪ್ರಧಾನಿಯಾಗಿ ಎನ್‌ಡಿಎ ಅಧಿಕಾರದಲ್ಲಿದ್ದು ಕೃಷ್ಣಂರಾಜು ಅವರಿಗೆ ಕೇಂದ್ರ ಸಚಿವ ಸ್ಥಾನ ದಕ್ಕಿತು. 2000 ರಿಂದ 2004 ರವರೆಗೆ ಅವರು ಕೇಂದ್ರ ರಾಜ್ಯ ಸಚಿವರಾಗಿ ಜನರ ಸೇವೆ ಮಾಡಿದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು, ರಕ್ಷಣಾ ಖಾತೆ ರಾಜ್ಯ ಸಚಿವರಾಗಿ, ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವರಾಗಿ ಮತ್ತು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ಮತ್ತೊಮ್ಮೆ 2004ರಲ್ಲಿ ನರಸಾಪುರಂ ಲೋಕಸಭೆಯಿಂದ ಸಂಸದರಾಗಿ ಸ್ಪರ್ಧಿಸಿ ಸೋಲನ್ನುಂಡರು.

2009 ರಲ್ಲಿ ಮೆಗಾಸ್ಟಾರ್ ಸ್ಥಾಪಿಸಿದ ಪ್ರಜಾರಾಜ್ಯಂ ಪಕ್ಷಕ್ಕೆ ಸೇರಿದ ಕೃಷ್ಣಂರಾಜು, 2009 ರ ಲೋಕಸಭೆ ಚುನಾವಣೆಯಲ್ಲಿ ರಾಜಮಂಡ್ರಿಯಿಂದ ಸ್ಪರ್ಧಿಸಿದರು. ಆ ಚುನಾವಣೆಯ ಸೋಲು ಮತ್ತು ಪ್ರಜಾರಾಜ್ಯವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದರಿಂದ ಕೃಷ್ಣಂರಾಜ್ ಸ್ವಲ್ಪ ಕಾಲ ರಾಜಕೀಯದಿಂದ ದೂರ ಉಳಿದು ಪುನಃ 2013ರಲ್ಲಿ ಬಿಜೆಪಿಯ ಅಂದಿನ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾದರು. ಅಂದಿನಿಂದ ಇಲ್ಲಿವರೆಗೂ ಬಿಜೆಪಿಯಲ್ಲಿಯೇ ಮುಂದುವರಿದವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ರಾಜಕೀಯ ಪಕ್ಷಗಳ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿ ಕೃಷ್ಣರಾಜು ಅವರೊಂದಿಗಿನ ಒಡನಾಟವನ್ನು ಸ್ಮರಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!