ಕಳಪೆ ಕಾಮಗಾರಿ: ಮತ್ತೆ ಕುಸಿಯುತ್ತಿದೆ ಕೌಟಾ ಸೇತುವೆ

ಹೊಸದಿಗಂತ ವರದಿ, ಬೀದರ್:

ಬೀದರ-ಔರಾದ್(ಬಿ) ಮಾರ್ಗ ಮಧ್ಯೆ ಕೌಟಾ ಗ್ರಾಮದ ಬಳಿ ಮಾಂಜರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕಳಪೆ ಕಾಮಗಾರಿಯ ಕಾರಣ ಕುಸಿಯುತ್ತಿದೆ.
ಕಳೆದ ವರ್ಷ ಸೇತುವೆಯ ನಡುವೆ ಬಿರುಕು ಬಿಟ್ಟ ಕಾರಣ ಸಾರ್ವಜನಿಕರ ಒತ್ತಾಯದ ಮೇರೆಗೆ ಸೆತುವೆ ರಿಪೇರಿ ಕಾರ್ಯ ಕೈಗೊಳ್ಳಲಾಗಿತ್ತು.
ಕೋಟಿಗಟ್ಟಲೆ ಹಣ ಖರ್ಚಾದರೂ ರಿಪೇರಿ ಕಾರ್ಯ ಮುಗಿದ ೮ ತಿಂಗಳಲ್ಲೇ ಸೇತುವೆಯ ದಡಗಳಲ್ಲಿ ಕುಸಿದಿದೆ. ಔರಾದ್ ನಿಂದ ಬೀದರ್ ಕಡೆಗೆ ಪ್ರತಿ ದಿನ ಸಾವಿರಾರು ಜನ ಪ್ರಯಾಣಿಸುತ್ತಾರೆ. ಈ ಸೇತುವೆ ಮಾರ್ಗದ ಮೂಲಕ ಬೀದರಿಗೆ ಅರ್ಧ ಗಂಟೆ ಕಡಿಮೆ ಸಮಯದಲ್ಲಿ ತಲುಪಬಹುದು, ಸೇತುವೆ ಮೂಲಕ ಸಂಚಾರ ನಿಂತು ಹೋದರೆ ವಡಗಾಂವ ಮೂಲಕ ಸುತ್ತು ಹಾಕಿ ಬರಬೇಕಾಗುತ್ತದೆ. ಈ ಮಾರ್ಗ ರಾಷ್ಟ್ರೀಯ ಹೆದ್ದಾರಿ ಯಾಗಿ ಇತ್ತಿಚೆಗೆ ಸೇರಿಸಲಾಗಿದೆ, ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಸೇತುವೆಯ ಎರಡೂ ಕಡೆ ಭೂಕುಸಿತ ಉಂಟಾಗಿದ್ದು ಕಳಪೆ ಮಟ್ಟದ ಕಾಮಗಾರಿ ಮಾಡಿರುವ ಕಾರಣ ಪದೇ ಪದೇ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಈ ಮಾರ್ಗ ಮಧ್ಯೆ ಸಂಚಾರ ದಟ್ಟಣೆ ಹೆಚ್ಚಿರುವ ವಿಚಾರ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಗೊತ್ತಿದ್ದರೂ ಕನಾಮಕೆ ವಾಸ್ತೆ ತೆಪೆ ಹಚ್ಚಲು ಕಳಪೆ ಕಾಮಗಾರಿ ಮಾಡಲಾಗಿದೆ ಕಳಪೆ ಕಾಮಗಾರಿ ವಿಚಾರ ಗೊತ್ತಿದ್ದರೂ ಗುತ್ತಿಗೆದಾರರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಗದಲ್ಲಿ ಸಂಚರಿಸುವ ಜನರ ಸುರಕ್ಷತೆಗಾಗಿ ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಶೀಘ್ರದಲ್ಲಿ ಸೇತುವೆ ರಿಪೇರಿ ಕಾರ್ಯ ಮುಗಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!