October 27, 2026
Tuesday, October 27, 2026
spot_img

ಟ್ರಾಫಿಕ್ ದಂಡಕ್ಕೆ ‘ಪವರ್’ ಟ್ರೀಟ್‌ಮೆಂಟ್: ಸುಪ್ರೀಂ ಕೋರ್ಟ್ ಹೊಸ ಐಡಿಯಾ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಬಾಕಿ ಇರುವ ಸಂಚಾರ ದಂಡವನ್ನು ವಸೂಲಿ ಮಾಡಲು ಸಾಮಾನ್ಯ ಕ್ರಮಗಳ ಜೊತೆಗೆ ವಿಭಿನ್ನ ಮಾರ್ಗಗಳನ್ನು ಉಪಯೋಗಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿದೆ.

ಇ-ಚಲನ್‌ಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ

ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ, ಕೇವಲ ಇ-ಚಲನ್‌ಗಳನ್ನು ಜಾರಿಗೊಳಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೆ ದೇಶಾದ್ಯಂತ ಬಾಕಿ ಉಳಿದಿರುವ ಸಂಚಾರ ದಂಡದ ಪ್ರಮಾಣವೂ ಈಗ ಗಮನ ಸೆಳೆದಿದೆ.

45 ಸಾವಿರ ಕೋಟಿ ಮೊತ್ತ ಬಾಕಿ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ ಸುಮಾರು 45 ಸಾವಿರ ಕೋಟಿ ಮೊತ್ತದ ಸಂಚಾರ ದಂಡ ಬಾಕಿ ಉಳಿದಿದ್ದು, ಈ ಪೈಕಿ ಸುಮಾರು 25 ಸಾವಿರ ಕೋಟಿಯಷ್ಟು ವಸೂಲಾಗಿರುವುದಾಗಿ ವಿಚಾರಣೆ ವೇಳೆ ತಿಳಿಸಲಾಗಿದೆ. ಇನ್ನೂ ಸುಮಾರು 20 ಸಾವಿರ ಕೋಟಿ ಸಂಗ್ರಹವಾಗಬೇಕಿದೆ.

ಬಾಕಿ ದಂಡ ಪಾವತಿಸುವವರೆಗೆ ವಾಹನದ ನೋಂದಣಿ ನವೀಕರಣಕ್ಕೆ ನಿರ್ಬಂಧ, ಮಾಲೀಕತ್ವ ವರ್ಗಾವಣೆ ತಡೆ, ಡುಪ್ಲಿಕೇಟ್ ನೋಂದಣಿ ಪ್ರಮಾಣಪತ್ರ ನೀಡದಿರುವುದು ಸೇರಿದಂತೆ ಹಲವು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.

ಇದನ್ನೂ ಓದಿ:

ಇದರ ಜೊತೆಗೆ, ಬಾಕಿ ಚಲನ್ ಹೊಂದಿರುವ ವಾಹನಗಳನ್ನು ಪರಿವಾಹನ್ ಪೋರ್ಟಲ್‌ನಲ್ಲಿ ಗುರುತಿಸುವುದು, ಅಂತಹ ವಾಹನಗಳ ಮಾಲೀಕರ ಚಾಲನಾ ಪರವಾನಗಿ ನವೀಕರಣಕ್ಕೆ ನಿರ್ಬಂಧ ಹೇರುವುದು ಅಥವಾ ಅಗತ್ಯವಿದ್ದರೆ ಅಮಾನತುಗೊಳಿಸುವಂತಹ ಕ್ರಮಗಳನ್ನೂ ಪರಿಗಣಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ವಾಹನಗಳ ಯಾದೃಚ್ಛಿಕ ತಪಾಸಣೆ ನಡೆಸಿ, ಬಾಕಿ ದಂಡ ಪಾವತಿಸದ ವಾಹನಗಳು ಪತ್ತೆಯಾದರೆ ಅವುಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯನ್ನೂ ನ್ಯಾಯಾಲಯ ಉಲ್ಲೇಖಿಸಿದೆ.

ಕೊನೆಯ ಅಸ್ತ್ರ

ಇವೆಲ್ಲ ಕ್ರಮಗಳ ನಂತರವೂ ದಂಡ ವಸೂಲಿ ಪರಿಣಾಮಕಾರಿಯಾಗದಿದ್ದರೆ, ಬಾಕಿ ಇರುವ ಸಂಚಾರ ದಂಡವನ್ನು ವಿದ್ಯುತ್ ಬಿಲ್‌ಗೆ ಸೇರಿಸುವಂತಹ ಹೊಸ ವ್ಯವಸ್ಥೆ ರೂಪಿಸಬಹುದೇ ಎಂಬುದನ್ನು ಪರಿಶೀಲಿಸುವಂತೆ ನ್ಯಾಯಮೂರ್ತಿ ಪಾರ್ದಿವಾಲಾ ಸಲಹೆ ನೀಡಿದ್ದಾರೆ. ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ, ಈ ರೀತಿಯ ವ್ಯವಸ್ಥೆ ದಂಡ ಪಾವತಿಗೆ ಪ್ರೇರಣೆ ನೀಡಬಹುದು ಎಂಬುದು ನ್ಯಾಯಾಲಯದ ಅಭಿಪ್ರಾಯ.

Must Read