May 27, 2026
Wednesday, May 27, 2026
spot_img

ಬಕ್ರೀದ್‌ಗೂ ಮುನ್ನ ಗೋಸಾಗಣೆ ವಿರುದ್ಧ ಪ್ರಭು ಚವ್ಹಾಣ ಗರಂ: ಕಠಿಣ ಕ್ರಮಕ್ಕೆ ಆಗ್ರಹ

ಹೊಸದಿಗಂತ ವರದಿ ಬೀದರ್:

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಗೋಹತ್ಯೆ ಹಾಗೂ ಜಾನುವಾರುಗಳ ಅಕ್ರಮ ಸಾಗಣೆ ಕೆಲಸಕ್ಕೆ ಕಡಿವಾಣ ಬೀಳಲಿ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಗೋಮಾತೆಯ ಮಹತ್ವ ವಿವರಿಸಿದ ಶಾಸಕ

ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸನಾತನ ಧರ್ಮದಲ್ಲಿ ಗೋಮಾತೆಗೆ ಅತ್ಯಂತ ಪೂಜನೀಯ ಸ್ಥಾನವಿದೆ. ಗೋವು ಕೇವಲ ಪ್ರಾಣಿಯಲ್ಲ, ಕೋಟ್ಯಂತರ ಹಿಂದೂಗಳ ಭಾವನೆಗಳ ಪ್ರತೀಕ. ಗೋವಿನ ಹಾಲು ಅಮೃತಕ್ಕೆ ಸಮಾನವೆಂದು ಪರಿಗಣಿಸಲಾಗುತ್ತದೆ. ಗೋಮೂತ್ರದಲ್ಲಿ ಔಷಧೀಯ ಗುಣಗಳಿರುತ್ತವೆ. ಗ್ರಾಮೀಣ ಆರ್ಥಿಕ ವ್ಯವಸ್ಥೆ, ಕೃಷಿ ಚಟುವಟಿಕೆ ಮತ್ತು ಜೀವನದೊಂದಿಗೆ ಅವಿನಾಭಾವ ಸಂಬಂಧವಿದೆ. ಆದ್ದರಿಂದ ಗೋಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಗೋಸಾಗಣೆ ವಿರುದ್ಧ ವಿಶೇಷ ಕಾರ್ಯಾಚರಣೆಗೆ ಆಗ್ರಹ

ಗೋವುಗಳ ಸಂರಕ್ಷಣೆಗಾಗಿ ಹಿಂದೆ ನಮ್ಮ ಸರ್ಕಾರ ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ- ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದೆ. ಆದರೂ ಸಹ ರಾಜ್ಯದಲ್ಲಿ ರಾಜಾರೋಷವಾಗಿ ಅಕ್ರಮ ಗೋ ಸಾಗಾಣಿಕೆ ಮತ್ತು ಗೋವಧೆ ಎಗ್ಗಿಲ್ಲದೆ ನಡೆಯುತ್ತಿರುವುದು ದುಃಖಕರ ಮತ್ತು ಖಂಡನೀಯ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲೆಯ ವಿವಿಧ ಭಾಗಗಳಿಂದ ಗೋವುಗಳನ್ನು ಅಕ್ರಮವಾಗಿ ಹೈದ್ರಾಬಾದ್, ಮುಂಬೈ ಹಾಗೂ ಪುಣೆ ನಗರಗಳಿಗೆ ಸಾಗಿಸಲಾಗುತ್ತಿದೆ. ಈ ಅಕ್ರಮ ಚಟುವಟಿಕೆಗಳನ್ನು ತಡೆಯಲು ಪೊಲೀಸ್ ಇಲಾಖೆ ಮತ್ತು ಪಶು ಸಂಗೋಪನೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ಸ್ಥಾಪನೆಗೆ ಸಲಹೆ

ಜಿಲ್ಲೆಯ ಗಡಿಭಾಗಗಳಲ್ಲಿ ವಿಶೇಷ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ, ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ಮೇಲೆ ನಿಗಾ ವಹಿಸಬೇಕು. ಅಕ್ರಮ ಗೋಸಾಗಣೆ ಹಾಗೂ ಗೋಹತ್ಯೆಯಲ್ಲಿ ತೊಡಗುವವರ ವಿರುದ್ಧ ಯಾವುದೇ ರಾಜಕೀಯ ಅಥವಾ ಇತರ ಒತ್ತಡಗಳಿಗೆ ಮಣಿಯದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ

ಬೀದರ ಜಿಲ್ಲೆಯಿಂದ ಗೋಮಾತೆ ಅಕ್ರಮವಾಗಿ ಕಸಾಯಿ ಖಾನೆಗೆ ಹೋಗಬಾರದು. ಗೋಮಾತೆಯ ಬಲಿ ನಡೆಯಕೂಡದು. ಗೋಸಂರಕ್ಷಣೆಯ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ. ಅಕ್ರಮ ಗೋ ಸಾಗಾಣಿಕೆ ಮತ್ತು ಗೋಹತ್ಯೆ ತಡೆಯುವಲ್ಲಿ ವಿಫಲರಾದರೆ ನಾನು ಸುಮ್ಮನಿರುವುದಿಲ್ಲ ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ವಿರುದ್ಧ ನಿರ್ಲಕ್ಷ್ಯದ ಆರೋಪ

ಗೋವುಗಳ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಜಾರಿಗೊಳಿಸಿದ್ದ ಹಲವು ಜನಪ್ರಿಯ ಯೋಜನೆಗಳನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದೆ. ಜಿಲ್ಲೆಗೊಂದು ಗೋಶಾಲೆ ನಿರ್ಮಾಣ ಯೋಜನೆಗೆ ಹಣವಿಲ್ಲ. ಪುಣ್ಯಕೋಟಿ ದತ್ತು ಯೋಜನೆ ನಿಲ್ಲಿಸಲಾಗಿದೆ. ಪ್ರಾಣಿ ಕಲ್ಯಾಣ ಮಂಡಳಿ, ಸಹಾಯವಾಣಿ ಕೇಂದ್ರ ಕೆಲಸ ಮಾಡುತ್ತಿಲ್ಲ. ಪಶು ಸಂಜೀವಿನಿ ಆಂಬ್ಯುಲೆನ್ಸ್‌ಗಳು ನಿಂತಲ್ಲೇ ತುಕ್ಕು ಹಿಡಿಯುತ್ತಿವೆ. ಗೋಸಂರಕ್ಷಣೆ ಕುರಿತ ಸರ್ಕಾರದ ನಿರ್ಲಕ್ಷ್ಯದಿಂದ ರೈತರು ಮತ್ತು ಗೋಭಕ್ತರಲ್ಲಿ ಆತಂಕ ಮೂಡಿದೆ. ಗೋವಧೆ ತಡೆಯಲು ವಿಫಲವಾಗಿರುವ ಸರ್ಕಾರಕ್ಕೆ ಗೋಮಾತೆಯ ಶಾಪ ತಟ್ಟಲಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !