ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಮುಖ ಆರೋಪಿ ಅತೀಕ್ ಅಹ್ಮದ್‌ನನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಬಂಧನವಾಗಿರುವವರಲ್ಲಿ ಈತ 21ನೇ ಆರೋಪಿ. ಈತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯನೆಂದು ಹೇಳಲಾಗಿದೆ.
2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದು ಪಿಎಫ್ಐ ಸಂಘಟನೆಯ ಸದಸ್ಯರ ಕುಕೃತ್ಯ ಎಂಬುದು ತಿಳಿದುಬಂದಿದ್ದರಿಂದ ಆಗ ರಾಜ್ಯ ಸರ್ಕಾರ, ಇದನ್ನು ಎನ್ಐಗೆ ವಹಿಸಿತ್ತು. ಆಗಿನಿಂದಲೂ ತನಿಖೆ ನಡೆಸುತ್ತಿರುವ ಎನ್ಐಎ ಇದುವರೆಗೆ 21 ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಆರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಎನ್ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ. ಅವರನ್ನು ಹಿಡಿದುಕೊಟ್ಟವರಿಗೆ ಬಹುಮಾನವನ್ನು ನೀಡುವುದಾಗಿಯೂ ಘೋಷಿಸಲಾಗಿದೆ.
ಪಿಎಫ್‌ಐ ನಾಯಕರ ಮಾರ್ಗದರ್ಶನದಲ್ಲಿ ಅತೀಕ್, ಪ್ರಕರಣದ ಪ್ರಮುಖ ಸಂಚುಕೋರ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿ ಸಹಾಯ ಮಾಡಿದ್ದ. ಜನರಲ್ಲಿ ಭಯ ಮತ್ತು ಕೋಮು ಅಶಾಂತಿಯನ್ನು ಹುಟ್ಟುಹಾಕಲು ಪಿಎಫ್‌ಐ ಕಾರ್ಯಸೂಚಿಯ ಭಾಗವಾಗಿ ಕೊಲೆಯನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು ಎಂದು ಎನ್‌ಐಎ ಹೇಳಿದೆ.