ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ.

ಸುಳ್ಯ ಮೂಲದ ಮುಸ್ತಾಫ ಪೈಚಾರ್, ಸೋಮವಾರಪೇಟೆ ಮೂಲದ ಇಲಿಯಾಸ್ ಹಾಗೂ ಸಿರಾಜ್‌ ಬಂಧಿತರು. ಇವರಲ್ಲಿ ಮುಸ್ತಾಫನನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಸಕಲೇಶಪುರ ತಾಲ್ಲೂಕಿನ ಆನೆಮಹಲ್‌ ಎಂಬಲ್ಲಿ ಆರೋಪಿಗಳನ್ನು ಎನ್‌ಐಎ ವಶಕ್ಕೆ ಪಡೆದಿದೆ. ಆನೆಮಹಲ್‌ನ ಸಿರಾಜ್ ಎಂಬವರ ಬಳಿ ಮುಸ್ತಾಫ ಪೈಚಾರ್ ಹಾಗೂ ಇಲಿಯಾಸ್ ಕೆಲಸಕ್ಕೆ ಸೇರಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸಿರಾಜ್‌ನನ್ನೂ ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ.

ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ ಮುಸ್ತಾಫನಿಗಾಗಿ ಎನ್‌ಐಎ ವರ್ಷಗಳಿಂದ ಹುಡುಕುತ್ತಿತ್ತು. ಸುಳ್ಯದ ಶಾಂತಿನಗರ ನಿವಾಸಿಯಾದ ಮುಸ್ತಾಫ ಪ್ರಕರಣದ A4 ಆಗಿದ್ದಾನೆ. ಹಾಸನ ಜಿಲ್ಲೆ ಸಕಲೇಶಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಗಿದ್ದ ಆರೋಪಿಯನ್ನು NIA ತಂಡ ಬಂಧಿಸಿದೆ.

ಬೆಳ್ಳಾರೆ ಪರಿಸರದಲ್ಲಿ ಹಿಂದು ಸಂಘಟನೆಯ ಸಕ್ರಿಯ ನಾಯಕರಾಗಿ ಗಮನ ಸೆಳೆದಿದ್ದ ಪ್ರವೀಣ್‌ ನೆಟ್ಟಾರು ಅವರನ್ನು 2022ರ ಜುಲೈ 26ರಂದು ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ಸಂಬಂಧ ಪಿಎಫ್‌ಐ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆನ್ನಲಾದ 10ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯದಲ್ಲಿ ಸುಮಾರು 1500 ಪುಟಗಳ ಚಾರ್ಜ್​ಶೀಟ್​ ಈ ಹಿಂದೆ ಎನ್‌ಐಎ ಸಲ್ಲಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!