April 30, 2026
Thursday, April 30, 2026
spot_img

ಕಟೀಲು ಯಕ್ಷಗಾನ ಮೇಳದ ಇತಿಹಾಸ ದಾಖಲೀಕರಣಕ್ಕೆ ಸಿದ್ಧತೆ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಕಟೀಲು ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿಯು ತನ್ನ ಏಳನೆಯ ಮೇಳದೊಂದಿಗೆ ದಿಗ್ವಿಜಯಕ್ಕೆ ಸಜ್ಜಾಗಿದೆ. ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಆಸ್ರಣ್ಣ ಕುಟುಂಬದವರು ಮತ್ತು ಕಲ್ಲಾಡಿ ಮನೆಯವರು ಈ ದಿಗ್ವಿಜಯ ನಾಂದಿಯ ಸಂದರ್ಭವನ್ನು ಅವಿ ಸ್ಮರಣೀಯವಾಗಿಸಬೇಕೆಂಬ ಸಂಕಲ್ಪವನ್ನು ಹೊಂದಿದ್ದಾರೆ.

ಶ್ರೀಹರಿನಾರಾಯಣದಾಸ ಆಸ್ರಣ್ಣರು ಮತ್ತು ಕಲ್ಲಾಡಿ ದೇವಿಪ್ರಸಾದ ಶೆಟ್ಟರ ನಿರ್ದೇಶನದಲ್ಲಿ ಕಟೀಲು ಮೇಳದ ಇತಿಹಾಸವನ್ನು ಆದಷ್ಟು ಮಟ್ಟಿಗೆ ದಾಖಲಿಸುವ ಮಹತ್ತ್ವದ ಕೆಲಸವನ್ನು ಉಪಕ್ರಮಿಸಲಾಗಿದೆ.

ಈ ಕೆಲಸವು ಆದಷ್ಟು ಶೈಕ್ಷಣಿಕ ಮಟ್ಟದಲ್ಲಿ ನಡೆಯಬೇಕು ಮತ್ತು ಮುಂದಿನ ದಿನಗಳಲ್ಲಿ ಯಕ್ಷಗಾನದ ಕುರಿತ ಸಂಶೋಧಕರಿಗೆ ಲಭ್ಯವಾಗಿರ ಬೇಕೆಂಬುದು ಯೋಚನೆಯಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕಟೀಲು ಮೇಳದ ವಸ್ತು-ವಿಷಯಗಳ ಸಂಗ್ರಹಕ್ಕೆ ತೊಡಗಿಕೊಳ್ಳಲಾಗಿದೆ. ಯಕ್ಷಗಾನ ಕಲಾರಸಿಕರು, ಕಟೀಲು ಕ್ಷೇತ್ರದ ಮತ್ತು ಮೇಳದ ಭಕ್ತಾಭಿಮಾನಿಗಳು ತಮ್ಮ ಸಂಗ್ರಹದಲ್ಲಿರುವ, ಕಟೀಲು ಮೇಳಕ್ಕೆ ಸಂಬಂಧಿಸಿದ ವಸ್ತು-ವಿಷಯಗಳನ್ನು ನೀಡಿ ಉಪಕರಿಸಬೇಕೆಂದು ವಿನಂತಿಸಲಾಗಿದೆ. ಯಕ್ಷಗಾನಾಭಿಮಾನಿಗಳು ತಮ್ಮಲ್ಲಿರುವ ಸಂಗ್ರಹದ ಬಗ್ಗೆ ಪತ್ರ ಬರೆದು ತಿಳಿಸಬಹುದು ಅಥವಾ ವಾಟ್ಸಪ್ ಮೂಲಕ ಸಂದೇಶ ಕಳಿಸಬಹುದು. ಸಂದೇಶ ಕಳುಹಿಸುವಾಗ ತಮ್ಮ ಹೆಸರು, ಅಂಚೆ ವಿಳಾಸ, ಮೊಬೈಲ್ ಸಂಖ್ಯೆಯನ್ನು ಅವಶ್ಯವಾಗಿ ನಮೂದಿಸಬೇಕು.

ಸಂಗ್ರಹಕ್ಕೆ ನಿರೀಕ್ಷಿಸಲಾಗುವ ವಸ್ತು- ವಿಷಯಗಳು
ಕಟೀಲು ಮೇಳದ ಧ್ವನಿದಾಖಲೆ-ದೃಶ್ಯ ದಾಖಲೆಗಳು-ಫೊಟೊಗಳು, ಕಟೀಲು ಮೇಳದ ಕರಪತ್ರಗಳು, ಪ್ರಸಂಗ ಪುಸ್ತಕಗಳು, ಪ್ರಮುಖ ಪತ್ರಿಕಾ ಪ್ರಕಟಣೆಗಳು, ಕೃತಿಗಳು, ಪರಿಕರಗಳು, ಹಸ್ತಾಕ್ಷರದ ಪಾತ್ರಪಟ್ಟಿಗಳು, ಪತ್ರ ಸಂವಾದಗಳು, ವೇಷಭೂಷಣಗಳು. ವಸ್ತು- ವಿಷಯಗಳು ಹಳೆಯದಾದಷ್ಟೂ ಅವುಗಳ ಮೌಲ್ಯ ಅಧಿಕವಾಗುತ್ತದೆ. ಹಳೆಯ ವಸ್ತುಗಳು ಜೀರ್ಣಾವಸ್ಥೆಯಲ್ಲಿದ್ದರೂ ಅದೇ ಸ್ಥಿತಿಯಲ್ಲಿ ನಾವು ಸಂಗ್ರಹಿಸುತ್ತೇವೆ. 2000ನೇ ಇಸವಿಯ ಪೂರ್ವದಲ್ಲಿ ಕಟೀಲು ಮೇಳದ ಆಟವನ್ನು ನೋಡಿದ, ಕೇಳಿದ ಅನುಭವವಿದ್ದರೆ, ಕಲಾವಿದರು, ಪಾತ್ರಗಳು, ಆಟ ಆದ ವರ್ಷ, ತಿಂಗಳು, ದಿನಾಂಕ ಇತ್ಯಾದಿ ವಿವರಗಳೊಂದಿಗೆ ಮಾಹಿತಿ ನೀಡಿದರೆ ಅದೂ ಉಪಯಕ್ತವಾಗುತ್ತದೆ.

ಕೃತಿರೂಪದಲ್ಲಿ, ಸಂಗ್ರಹಾಲಯ ರೂಪದಲ್ಲಿ ಪ್ರಕಟಿಸುವ ಸಂದರ್ಭದಲ್ಲಿ ಸಂಗ್ರಹಮೂಲವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳ ಲಾಗುವುದು ಎಂದು ಮಿಥುನ ಕೊಡೆತ್ತೂರು (9448355998) ಹಾಗೂ ಡಾ. ಶ್ರುತ ಕೀರ್ತಿರಾಜ (9448506994) ವಿನಂತಿಸಿದ್ದಾರೆ. ಮೇಳದ ಕುರಿತಾದ ಮಾಹಿತಿಗಳನ್ನು ಅನಂತ ಪ್ರಕಾಶ, ಅಂಚೆಪೆಟ್ಟಿಗೆ ಸಂಖ್ಯೆ 15, ಕಿನ್ನಿಗೋಳಿ-547150 ಮೂಲ್ಕಿ ತಾಲೂಕು. ದ.ಕ. ಇಲ್ಲಿಗೆ ಅಥವಾ ಈಮೇಲ್ yakshaprabhakateel@gmail.com ಇಲ್ಲಿಗೆ ಕಳುಹಿಸಬಹುದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !