ತುರ್ಕಮೆನಿಸ್ತಾನ್ ಮತ್ತು ನೆದರ್ಲ್ಯಾಂಡ್ಸ್ ಭೇಟಿಗೆ ತೆರಳಿದ ರಾಷ್ಟ್ರಪತಿ ಕೋವಿಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಗಳ ರಾಜ್ಯ ಭೇಟಿಯಲ್ಲಿ ತುರ್ಕಮೆನಿಸ್ತಾನ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಹೊಸದಿಲ್ಲಿಯಿಂದ ಅವರು ತಮ್ಮ ಪ್ರಯಾಣ ಆರಂಭಿಸಿದ್ದಾರೆ.
ಇದು ತುರ್ಕಮೆನಿಸ್ತಾನ್‌ಗೆ ಭಾರತದ ರಾಷ್ಟ್ರಪತಿಗಳ ಮೊದಲ ಭೇಟಿಯಾಗಿದೆ. ಅಲ್ಲದೇ 1988 ರಲ್ಲಿ ರಾಷ್ಟ್ರಪತಿ ವೆಂಕಟರಾಮನ್ ಅವರ ಭೇಟಿಯ ನಂತರ 34 ವರ್ಷಗಳ ನಂತರ ನೆದರ್‌ಲ್ಯಾಂಡ್ಸ್‌ಗೆ ರಾಷ್ಟ್ರಪತಿಗಳು ಭೇಟಿ ನೀಡುತ್ತಿದ್ದಾರೆ. 2017ರಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈಗಾಗಲೇ 19 ದೇಶಗಳಿಗೆ ಭೇಟಿ ನೀಡಿದ್ದು, ಇದು 20-21ನೇ ರಾಷ್ಟ್ರಗಳಾಗಿವೆ.
ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಮನಾಥ್ ಕೋವಿಂದ್ ಅವರು ತುರ್ಕಮೆನಿಸ್ತಾನ್‌ ಮತ್ತು ನೆದರ್‌ಲ್ಯಾಂಡ್ಸ್‌ ದೇಶಗಳ ನಾಯಕತ್ವದೊಂದಿಗೆ ಮಾತುಕತೆ ನಡೆಸಲಿದ್ದಾರೆ.
ತುರ್ಕಮೆನಿಸ್ತಾನದ ಅಧ್ಯಕ್ಷರ ಆಹ್ವಾನದ ಮೇರೆಗೆ, ಕೋವಿಂದ್ ಅವರು ಏ. 1-4 ರವರೆಗೆ ತುರ್ಕಮೆನಿಸ್ತಾನ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಕೋವಿಂದ್ ಅವರು 2022 ರ ಜನವರಿಯಲ್ಲಿ ನಡೆದ ಭಾರತ-ಮಧ್ಯ ಏಷ್ಯಾ ಶೃಂಗಸಭೆಯ ಫಲಿತಾಂಶಗಳ ಅನುಷ್ಠಾನ ಸೇರಿದಂತೆ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಹಕಾರದ ವಿವಿಧ ವಿಷಯಗಳನ್ನು ಚರ್ಚಿಸಲು ತುರ್ಕಮೆನಿಸ್ತಾನ್‌ನ ಹೊಸ ಅಧ್ಯಕ್ಷ ಸೆರ್ದಾರ್ ಬರ್ಡಿಮುಹಮೆಡೋವ್ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲದೇ ಭೇಟಿಯ ಸಮಯದಲ್ಲಿ ಕೆಲವು ಒಪ್ಪಂದಗಳು / ಎಂಒಯುಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.

ಏ. 4-7 ನೆದರ್‌ಲ್ಯಾಂಡ್ಸ್ ಭೇಟಿ
ನಂತರ ಭಾರತದ ರಾಷ್ಟ್ರಪತಿಗಳು ನೆದರ್‌ಲ್ಯಾಂಡ್ಸ್‌ನ ಕಿಂಗ್ ವಿಲ್ಲೆಮ್ ಅಲೆಕ್ಸಾಂಡರ್ ಮತ್ತು ಅವರ ರಾಣಿ ಮ್ಯಾಕ್ಸಿಮಾ ಅವರ ಆಹ್ವಾನದ ಮೇರೆಗೆ ಏ. 4-7 ರವರೆಗೆ ಭೇಟಿ ಮಾಡುತ್ತಿದ್ದಾರೆ.
ನೆದರ್‌ಲ್ಯಾಂಡ್‌ಗೆ ಭೇಟಿ ನೀಡುವ ಸಂದರ್ಭದಲ್ಲಿ, ರಾಷ್ಟ್ರಪತಿಗಳು ರಾಜಮನೆತನದ ಜೋಡಿ ಮತ್ತು ನೆದರ್‌ಲ್ಯಾಂಡ್‌ನ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. 2022ರಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ವರ್ಷಗಳನ್ನು ಆಚರಿಸುತ್ತಿರುವುದರಿಂದ ಈ ಭೇಟಿ ಮಹತ್ವದ್ದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!