September 17, 2026
Thursday, September 17, 2026
spot_img

ತುಮಕೂರಿನಲ್ಲಿ ಪ್ರಧಾನಿ ಮೋದಿ ಬರ್ಥ್‌ಡೇ ಸ್ಪೆಷಲ್‌: ರಸ್ತೆಯಲ್ಲಿ ಪೊರಕೆ ಹಿಡಿದು ನಿಂತ ಸಚಿವ ವಿ. ಸೋಮಣ್ಣ

ಹೊಸದಿಗಂತ ವರದಿ ತುಮಕೂರು:

ಮನುಷ್ಯನಿಗೆ ನೈರ್ಮಲ್ಯ ಎಷ್ಟು ಮುಖ್ಯವೋ, ಆರೋಗ್ಯವೂ ಅಷ್ಟೇ ಮುಖ್ಯ. ಹಾಗಾಗಿ ಸ್ವಚ್ಛತೆ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 76ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಸ್ವಚ್ಛತಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಸ್ವಚ್ಛತಾ ಅಭಿಯಾನ ರಾಷ್ಟ್ರದ ಎಲ್ಲಾ ಭಾಗದಲ್ಲೂ ನಡೆಯುತ್ತಿದೆ ಎಂದರು.

ಪ್ರಧಾನಿಗಳ ಜನ್ಮದಿನದ ಅಂಗವಾಗಿ ಸ್ವಯಂ ಪ್ರೇರಣೆಯಿಂದ ಮಾಡುತ್ತಿರುವ ಸ್ವಚ್ಛತಾ ಅಭಿಯಾನ ಮುಂದಿನ ಪೀಳಿಗೆಗೆ ದಿಕ್ಸೂಚಿಯಾಗಲಿದೆ. ಈ ದಿಕ್ಸೂಚಿಯ ಜತೆಗೆ ಮುಂದಿನ ದಿನಗಳಲ್ಲಿ ಭಾರತೀಯರ ಸಾರ್ವಭೌಮತೆಗೆ ಪ್ರಧಾನಿ ಮೋದಿಯವರು ಸದಾ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ವಯಸ್ಸು ಎನ್ನುವುದಕ್ಕಿಂತ ಹೆಚ್ಚಾಗಿ ಅವರು ದೇಶದ ಅಭಿವೃದ್ಧಿಗೆ, ಸಾರ್ವಭೌಮತೆಗೆ ಕೈಗೊಳ್ಳುತ್ತಿರುವ ಅನೇಕ ಪ್ರಗತಿಪರ ಕಾರ್ಯಕ್ರಮಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಇಂತಹ ದಿಕ್ಸೂಚಿಯನ್ನು ನೀಡುವಂತಹ ಕಾರ್ಯವನ್ನು ನಾವೆಲ್ಲರೂ ಒಟ್ಟಾಗಿ ಮಾಡೋಣ ಎಂದು ಅವರು ಕರೆ ನೀಡಿದರು.

ವಿಶ್ವದ ಭೂಪಟದಲ್ಲಿ ಭಾರತವನ್ನು, ಭಾರತೀಯ ಸ್ವಾಭಿಮಾನವನ್ನು ಹೆಚ್ಚಿಸುವಂತಹ ಕೆಲಸವನ್ನು ಪ್ರಧಾನಿಗಳು ಮಾಡುತ್ತಿದ್ದಾರೆ. ದೇಶದಲ್ಲಿರುವ ಎಲ್ಲಾ ವರ್ಗದವರಿಗೂ ಸಮಾನತೆಯನ್ನು ನೀಡುವ ನಿಟ್ಟಿನಲ್ಲಿ ಸ್ವಚ್ಛತೆಗೆ, ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು. ತುಮಕೂರು ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆ. ಈ ಜಿಲ್ಲೆಯಲ್ಲಿ ಒಬ್ಬ ಲೋಕಸಭಾ ಸದಸ್ಯನಾಗಿ ನಾನು ಮನವಿ ಮಾಡುವುದೇನೆಂದರೆ ಎಲ್ಲರೂ ಒಟ್ಟಾಗಿ ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಎಂದರು. ಇದೇ ವೇಳೆ ರೈಲ್ವೆ ನಿಲ್ದಾಣದಲ್ಲಿ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗದ ಸಚಿವ ವಿ. ಸೋಮಣ್ಣ ಅವರು, ಕೈಯಲ್ಲಿ ಪೊರಕೆ ಹಿಡಿದು ಕಸಗುಡಿಸಿದರು. ನಂತರ ಮುಖಂಡ ಧನಿಯಾಕುಮಾರ್ ರವರು ಏರ್ಪಡಿಸಿದ್ದ ಶಾಲಾ ಮಕ್ಕಳಿಗೆ ನೋಟ್‍ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲಾ ಮಕ್ಕಳಿಗೆ ನೋಟ್‍ಬುಕ್‍ಗಳನ್ನು ವಿತರಿಸಿ, ಉತ್ತಮವಾಗಿ ವ್ಯಾಸಂಗ ಮಾಡುವಂತೆ ಕರೆ ನೀಡಿದರು.

ಇದಕ್ಕೂ ಮುನ್ನ ಸಚಿವ ಸೋಮಣ್ಣ ಅವರು ಗಣಪತಿ ಹಾಗೂ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಮಸಾಲೆ ಜಯರಾಮ್, ಎಂ.ಡಿ. ಲಕ್ಷ್ಮೀನಾರಾಯಣ್, ವೈ.ಹೆಚ್. ಹುಚ್ಚಯ್ಯ, ಧನಿಯಾಕುಮಾರ್, ಗಿರಿಜಾ ಧನಿಯಾಕುಮಾರ್, ಎಂ.ಸಿ. ಪ್ರಕಾಶ್, ಬ್ಯಾಟರಂಗೇಗೌಡ, ಮಲ್ಲಸಂದ್ರ ಶಿವಣ್ಣ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !