ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಗಾಪುರದಲ್ಲಿ ನಡೆದಿದ್ದ 2024 ರ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ತಮ್ಮ ಕುಟುಂಬದೊಂದಿಗೆ ಇಂದು ಪ್ರಧಾನಿ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಈ ವೇಳೆ ಅತಿ ಕಿರಿಯ ವಯಸ್ಸಿನಲ್ಲೇ ಐತಿಹಾಸಿಕ ಸಾಧನೆ ಮಾಡಿದ ಗುಕೇಶ್ರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪ್ರಧಾನಿ ಮೋದಿ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಭೇಟಿಯ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ‘ಚೆಸ್ ಚಾಂಪಿಯನ್ ಭಾರತದ ಹೆಮ್ಮೆಯ ಡಿ ಗುಕೇಶ್ ಅವರನ್ನು ಭೇಟಿ ಮಾಡಿದ್ದು ಸಂತಸ ತಂದಿದೆ. ಕಳೆದ ಕೆಲವು ವರ್ಷಗಳಿಂದ ನಾನು ಅವರೊಂದಿಗೆ ನಿಕಟವಾಗಿ ಸಂವಹನ ನಡೆಸುತ್ತಿದ್ದೇನೆ. ಅವರ ನಿರ್ಣಯ ಮತ್ತು ಸಮರ್ಪಣೆ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಅವರ ಆತ್ಮವಿಶ್ವಾಸ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ವಾಸ್ತವವಾಗಿ ಕೆಲವು ವರ್ಷಗಳ ಹಿಂದೆ ನಾನು ಅವರ ವೀಡಿಯೊವೊಂದನ್ನು ನೋಡಿದ್ದೆ ಅದರಲ್ಲಿ ಅವರು ನಾನು ಕಿರಿಯ ವಿಶ್ವ ಚಾಂಪಿಯನ್ ಆಗುವುದಾಗಿ ಹೇಳಿದ್ದರು. ಇದೀಗ ಅವರ ಹೇಳಿದಂತೆಯೇ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇನ್ನು ದೇಶದ ಹೆಮ್ಮೆಯ ಪ್ರಧಾನಿಯನ್ನು ಭೇಟಿಯಾದ ಗುಕೇಶ್ ಅವರಿಗೆ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆಯೂ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಮೋದಿ, ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಚೆಸ್ ಬೋರ್ಡ್ ಅನ್ನು ಉಡುಗೊರೆಯಾಗಿ ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗಿದೆ. ಗುಕೇಶ್ ಮತ್ತು ಅವರ ಎದುರಾಳಿ ಡಿಂಗ್ ಲಿರೆನ್ ಇಬ್ಬರೂ ಸಹಿ ಮಾಡಿರುವ ಚೆಸ್ ಬೋರ್ಡ್ ಅಮೂಲ್ಯವಾದ ಸ್ಮರಣಿಕೆಯಾಗಿದೆ ಎಂದಿದ್ದಾರೆ.