ಹೊಸಗಂತ ಡಿಜಿಟಲ್ ಡೆಸ್ಕ್
ಅಸ್ಸಾಂನ ಹಿಮಂತ್ ಬಿಸ್ವಾ ಸರ್ಕಾರ ಅನಧಿಕೃತ ಮದರಸಾಗಳ ವಿರುದ್ಧ ಸಮರ ಸಾರಿದೆ. ಈ ಮದರಸಾಗಳು ಜಿಹಾದಿ ಭಯೋತ್ಪಾದಕರೊಂದಿಗೆ ಸಂಪರ್ಕವನ್ನು ಹೊಂದಿರುವುದನ್ನು ಕಂಡುಹಿಡಿದ ನಂತರ, ಅಸ್ಸಾಂ ಸರ್ಕಾರವು ಇಸ್ಲಾಮಿಕ್ ಶಾಲೆಗಳಿಗೆ ಹಲವಾರು ನಿಯಮಾವಳಿಗಳಿಗಳನ್ನು ರೂಪಿಸಿದೆ. ಎಲ್ಲಾ ಸರ್ಕಾರಿ ಮದರಸಾಗಳನ್ನು ಮುಚ್ಚಿರುವ ಸರ್ಕಾರವು ಅವುಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಿದೆ. ಪ್ರಸ್ತುತ ಖಾಸಗಿಯಾಗಿ ನಡೆಸಲ್ಪಡುವ ಮದರಸಾಗಳು ಮಾತ್ರ ರಾಜ್ಯದಲ್ಲಿವೆ. ಇತ್ತೀಚಿನ ವಾರಗಳಲ್ಲಿ ಅವುಗಳ ಮೇಲೆಯೂ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಅವುಗಳಲ್ಲಿ ಮೂರು ಬಾಂಗ್ಲಾದೇಶದ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದು ಪತ್ತೆಯಾಗುತ್ತಲೇ ಅವುಗಳನ್ನು ಮುಲಾಜಿಲ್ಲದೆ ಕೆಡವಿಹಾಕಲಾಗಿದೆ. ಈಗ ಮತ್ತೊಂದು ಹಂತದ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಎಲ್ಲಾ ಮದರಸಾಗಳು ತಮ್ಮ ಹಣಕಾಸಿನ ಮೂಲ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಸೂಚಿಸಿದೆ.
ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ ಅವರು ಮುಸ್ಲಿಂ ಗುಂಪುಗಳ ಪ್ರತಿನಿಧಿಗಳೊಂದಿಗೆ ಈ ಸಂಬಂಧ ಸಭೆ ನಡೆಸಿ ಜಿಹಾದಿ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಮುಸ್ಲಿಂ ಮುಖಂಡರ ಬೆಂಬಲವನ್ನು ಕೋರಿದ್ದಾರೆ.
“ನಾವು ರಾಜ್ಯದಾದ್ಯಂತ ಇರುವ ಇಸ್ಲಾಮಿಕ್ ಸಂಘಟನೆಗಳನ್ನು ಭೇಟಿ ಮಾಡಿದ್ದೇವೆ. ಅವರ ಸಹಕಾರವಿಲ್ಲದೆ ನಾವು ರಾಜ್ಯದಲ್ಲಿ ಅಲ್-ಖೈದಾ ಮತ್ತು ಬಾಂಗ್ಲಾ ಮೂಲದ ಉಗ್ರ ಸಂಘಟನೆಗಳನ್ನು ಮಟ್ಟಹಾಕಲು ಸಾಧ್ಯವಿಲ್ಲ. ಬೆಂಬಲ ಮತ್ತು ಸಹಕಾರವನ್ನು ನೀಡುವಂತೆ ನಾವು ಅವರನ್ನು ಒತ್ತಾಯಿಸಿದ್ದೇವೆ ಮತ್ತು ಅವರು ತಮ್ಮ ಬೆಂಬಲವನ್ನು ನಮಗೆ ಭರವಸೆ ನೀಡಿದ್ದಾರೆ” ಎಂದು ಡಿಜಿಪಿ ಸಭೆಯ ನಂತರ ಹೇಳಿದ್ದಾರೆ.
ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಖಾಸಗಿ ಅಥವಾ ಕ್ವಾಮಿ ಮದರಸಾಗಳಿವೆ. ಅವು ತಮ್ಮದೇ ಆದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಸಂಬಂಧ ನಾವು ಹೊಸ ನಿಯಮಾವಳಿಗಳನ್ನು ರೂಪಿಸಿದ್ದೇವೆ. ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದಂತೆ ಮದರಸಾಗಳನ್ನು ನೋಂದಾಯಿಸುವ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಅಲ್ಲಿ ಮದರಸಾಗಳು ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಬೇಕು ಎಂದು ಹೇಳಿದ್ದಾರೆ.
ಅಪ್‌ಲೋಡ್ ಮಾಡಬೇಕಾದ ಮಾಹಿತಿಯು ಶಿಕ್ಷಕರು ಮತ್ತು ಸಂಸ್ಥಾಪಕರ ವಿವರಗಳು, ಮದರಾಸಾಗಳ ಹಣಕಾಸು ಮೂಲಗಳು, ಮದರಾಸಾ ಸ್ಥಾಪಿಸಲು ಭೂಮಿಯನ್ನು ಹೇಗೆ ಪಡೆಯಲಾಗಿದೆ ಮುಂತಾದ ವಿವರಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದ್ದಾರೆ.
“ನಾವು ಅಸ್ಸಾಂನಲ್ಲಿ ನಡೆಸಲಾಗುತ್ತಿರುವ ಎಲ್ಲಾ ಮದರಸಾಗಳ ಮಾಸ್ಟರ್ ಡೈರೆಕ್ಟರಿಯನ್ನು ರಚಿಸಲು ಬಯಸಿದ್ದೇವೆ. ಇದು ಕಠಿಣ ಕೆಲಸವಾಗಿದೆ, ಏಕೆಂದರೆ ಅವುಗಳಲ್ಲಿ ಹಲವು ನೋಂದಾಯಿಸದ ಮತ್ತು ಅನಧಿಕೃತವಾಗಿವೆ. ಅವುಗಳಲ್ಲಿ ಭಾರತ ವಿರೋಧಿ, ಜಿಹಾದಿ ವಿಚಾರಗಳನ್ನು ಹರಡಲಾಗುತ್ತಿದೆ. ಮದರಸಾಗಳನ್ನು ತಮ್ಮ ಕೆಟ್ಟ ಮೂಲಭೂತವಾದಿ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದನ್ನು ತಡೆಯುವುದು ನಮ್ಮ ಉದ್ದೇಶವಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.
ಧಾರ್ಮಿಕ ವಿಷಯಗಳ ಹೊರತಾಗಿ ಗಣಿತ, ವಿಜ್ಞಾನ, ಕಂಪ್ಯೂಟರ್, ಭೂಗೋಳ, ಇತಿಹಾಸ ಮುಂತಾದ ಸಾಮಾನ್ಯ ವಿಷಯಗಳನ್ನು ಮದರಸಾಗಳಲ್ಲಿ ಸೇರಿಸುವಂತೆ ಮುಸ್ಲಿಂ ಮುಖಂಡರಿಗೆ ಸೂಚಿಸಿರುವುದಾಗಿ ಡಿಜಿಪಿ ಭಾಸ್ಕರ್ ಜ್ಯೋತಿ ಮಹಾಂತ ಹೇಳಿದ್ದಾರೆ. ಈ ಸಲಹೆಗೆ ಸಮಾಜದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ 739 ಮದರಸಾಗಳು ಜಮೀಯತ್ ಉಲೇಮಾ-ಎ-ಹಿಂದ್ ಅಡಿಯಲ್ಲಿ ನೋಂದಣಿಯಾಗಿದ್ದು, 200 ಕ್ಕೂ ಹೆಚ್ಚು ಮದರಸಾಗಳು ನೋಂದಣಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿದರು. ಜಮಿಯತ್ ಅಡಿಯಲ್ಲಿ ನೋಂದಾಯಿಸಲಾದ ಮದರ್ಸಾಗಳಲ್ಲಿಯೂ ಸಹ ಸರ್ಕಾರದ ನಿಬಂಧನೆಗಳನ್ನು ಅನುಸರಿಸುತ್ತಿಲ್ಲ ಮತ್ತು ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ