ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮಹಿಳೆಯರಿಗಾಗಿ ಜಾರಿಗೆ ಬಂದಿರುವ ‘ಪ್ರಿಯದರ್ಶಿನಿ ಉಚಿತ ಪ್ರಯಾಣ ಯೋಜನೆ’ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ‘ಉಚಿತ’ ಪ್ರಯಾಣ ಪರಿಣಾಮ ಖಾಸಗಿ ಬಸ್ ವಲಯದ ಮೇಲೂ ಗೋಚರಿಸತೊಡಗಿದ್ದು, ವಿಶೇಷವಾಗಿ ಕಾಸರಗೋಡು-ತಲಪ್ಪಾಡಿ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಪ್ರಯಾಣಿಕರ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ ಎಂಬ ದೂರುಗಳು ಕೇಳಿಬಂದಿದೆ.
ಕೆಎಸ್ಸಾರ್ಟಿಸಿ ಕಡೆ ಮಹಿಳಾ ಪ್ರಯಾಣಿಕರ ಮುಖ!
ಯೋಜನೆ ಆರಂಭವಾದ ಬಳಿಕ ನಗರದಿಂದ ನಗರಕ್ಕೆ ಸಂಚರಿಸುವ ಅನೇಕ ಮಹಿಳೆಯರು ಖಾಸಗಿ ಬಸ್‌ಗಳನ್ನು ಬಿಟ್ಟು ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇದರ ಪರಿಣಾಮವಾಗಿ ಕೆಲ ಖಾಸಗಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕೆಲವು ಬಸ್‌ಗಳು ಬಹುತೇಕ ಪುರುಷ ಪ್ರಯಾಣಿಕರನ್ನೇ ಹೊತ್ತು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಸ್ ನಿರ್ವಾಹಕರು ಹೇಳುತ್ತಿದ್ದಾರೆ.
ಈಗಾಗಲೇ ಇಂಧನ ಬೆಲೆ ಏರಿಕೆ, ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನದ ಒತ್ತಡ ಎದುರಿಸುತ್ತಿರುವ ಖಾಸಗಿ ಬಸ್ ವಲಯಕ್ಕೆ ಉಚಿತ ಪ್ರಯಾಣ ಯೋಜನೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಕುಸಿತ ಮುಂದುವರಿದರೆ ಆದಾಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಖಾಸಗಿ ಬಸ್‌ಗಳ ಆರ್ಥಿಕ ಸಂಕಷ್ಟ ನಿವಾರಣೆಗೆ ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಮರುಪರಿಶೀಲಿಸಬೇಕು ಎಂದು ಬಸ್ ಮಾಲೀಕರು ಒತ್ತಾಯಿಸಿದ್ದಾರೆ. ಆದರೆ ಈ ಪ್ರಸ್ತಾವನೆಗೆ ವಿದ್ಯಾರ್ಥಿ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಿಸುವ ಯಾವುದೇ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿವೆ.



