ಹೊಸದಿಗಂತ ವರದಿ, ಹಾಸನ :
ಪ್ರೊ. ಭಗವಾನ್ ರವರು ದುರುದ್ದೇಶ ಪೂರ್ವಕವಾಗಿ ಪ್ರಚೋದನಕಾರಿ ಭಾಷಣಗಳ ಮಾಡಿ ಧರ್ಮ ಮತ್ತು ಸಮುದಾಯಗಳ ನಡುವೆ ಒಡಕು ಮೂಡಿಸಿ, ಸಮುದಾಯಗಳ ಮಾನಹಾನಿ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಜಿಲ್ಲಾಧ್ಯಕ್ಷ ಹರೀಶ್ ಆರೋಪ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರೋ ಭಗವಾನ್ ಅವಹೇಳನಕಾರಿ ಹೇಳಿಕೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೊ. ಭಗವಾನ್ ಹಿಂದೂ ಧರ್ಮ ಮತ್ತು ಸಮುದಾಯದ ಬಗ್ಗೆ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿ ಒಡಕು ಮೂಡಿಸುತ್ತಿದ್ದಾರೆ. ಅವರ ಈ ರೀತಿಯ ಹೇಳಿಕೆಗಳಿಂದ ಹಲವಾರು ಬಾರಿ ಗಲಭೆ, ಘರ್ಷಣೆಗಳಾಗಿವೆ. ವಿಚಾರವಾದಿ ಎಂಬ ಸ್ವಯಂಘೋಷಿತ ನಾಮ ಪಟ್ಟವನ್ನು ಹಾಕಿಕೊಂಡು ಭಾರತದ ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರವನ್ನು ದುರುದ್ದೇಶದಿಂದ ತಮ್ಮ ಪ್ರಚಾರದ ತೆವಲುಗಳಿಗೆ ಒಳಪಡಿಸಿಕೊಂಡು ಆಗಾಗ ಕೆಲವು ಸಮುದಾಯಗಳನ್ನು ಗುರಿಪಡಿಸಿಕೊಂಡು ಕೆಲಸಕ್ಕೆ ಬಾರದ ಕೆಲವು ಉಲ್ಲೇಖಗಳನ್ನು ನೀಡುತ್ತಾ ತಿರುಚುತ್ತಿದ್ದಾರೆ ಎಂದು ಆರೋಪಿಸಿದರು.
ಅ. 13 ರ ಮೈಸೂರಿನಲ್ಲಿ ನಡೆದ ಮಹಿಷ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ನಮ್ಮ ಹಿಂದೂ ಧರ್ಮದ ಪುರಾಣ ಪುರುಷ ‘ಶ್ರೀರಾಮಚಂದ್ರ’ ಮತ್ತು ನಮ್ಮ ಒಕ್ಕಲಿಗ ಸಮುದಾಯದ ಬಗ್ಗೆ ‘ಒಕ್ಕಲಿಗರು ಸಂಸ್ಕೃತಿಹೀನ ಪಶುಗಳು’ ಎಂದು ಹೇಳಿಕೆ ನೀಡಿ, ತದನಂತರ ಅದನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ, ರಾಷ್ಟ್ರಕವಿ ಕುವೆಂಪು ರವರು ರಚಿಸಿರುವ ಕೃತಿಯಾದ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಇದೆ ಎಂದು ಉಲ್ಲೇಖಿಸಿ, ನಮ್ಮ ಸಮುದಾಯದ ಬಗ್ಗೆ ದುರುದ್ದೇಶ ಪೂರಿತ ಹೇಳಿಕೆಯನ್ನು ಚಪ್ಪಾಳೆ ಗಿಟ್ಟಿಸುವ ಸಲುವಾಗಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಿಷನ ಬಗ್ಗೆ ಉಲ್ಲೇಖವಿರಬೇಕೆ ವಿನಹ ಅದಕ್ಕೆ ಸಂಬಂಧಪಡದ ಬೇರೆ ಸಮುದಾಯ ಅಂದರೆ ನಮ್ಮ ಒಕ್ಕಲಿಗ ಸಮುದಾಯದ ಬಗ್ಗೆ ಸಂಸ್ಕೃತಿ ಹೀನರು ಎಂದು ಹೇಳಿರುವುದು ಸಮಂಜಸವಲ್ಲ. ಈ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದರು.
ನಮ್ಮ ಒಕ್ಕಲಿಗ ಸಮುದಾಯ ಈ ರಾಜ್ಯದ ಪ್ರಮುಖ ಸಮುದಾಯವಾಗಿ ಗುರ್ತಿಸಿಕೊಂಡಿದ್ದು ಮತ್ತು ರಾಷ್ಟ್ರದಲ್ಲೇ ಹಲವಾರು ಬೇರೆ ಬೇರೆ ನಾಮಾಂಕಿತದಲ್ಲಿ ಗುರುತಿಸಿಕೊಂಡಿದೆ. ನಮ್ಮ ಒಕ್ಕಲಿಗ ಸಮುದಾಯದ ಸಂಸ್ಕೃತಿ, ಪರಂಪರೆ, ನಾಗರಿಕತೆ, ಅವರ ಸೌಜನ್ಯ ಪೂರಿತ ಸುಸಂಸ್ಕೃತಿ, ಸಂಸ್ಕಾರದ ಬಗ್ಗೆ ಉಲ್ಲೇಖ ವಿರುತ್ತದೆ. ನಾಡು ಕಟ್ಟಿದ ಕೆಂಪೇಗೌಡರು ವಿವಿಧ ಸಮುದಾಯದ ಜನರಿಗೆ ವಿವಿಧ ಪೇಟೆಗಳನ್ನೇ ಕಟ್ಟುಕೊಟ್ಟಿದ್ದರು. ಹಾಗೂ ಒಕ್ಕಲಿಗ ಸಮುದಾಯದವರು ಬೇಸಾಯ ಸಂಸ್ಕೃತಿಯನ್ನೇ ರೂಡಿಸಿಕೊಂಡಿರುವ ಅನ್ನದಾತರು. ಫ್ರೋ. ಭಗವಾನ್ ನಮ್ಮ ಘನತೆ & ಗೌರವಕ್ಕೆ ಚ್ಯುತಿ ಉಂಟು ಮಾಡಿ ನಮ್ಮ ಸಮುದಾಯಕ್ಕೆ ಮಾನಹಾನಿಯಾಗಿದ್ದು ಈ ಕೂಡಲೇ ಇವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.