ಕೊಡಗಿನಾದ್ಯಂತ ನಿಷೇಧಾಜ್ಞೆ: ಜಿಲ್ಲಾಡಳಿತದ ಕ್ರಮಕ್ಕೆ‌ ಕೊಡವ ಸಮಾಜ ಸ್ವಾಗತ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯನ್ನು ಮತ್ತೊಮ್ಮೆ ರಣರಂಗವಾಗಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆ. 24ರಿಂದ 27ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಿರುವ ಜಿಲ್ಲಾಡಳಿತ ಕ್ರಮವನ್ನು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸ್ವಾಗತಿಸಿದೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರುಗಳು, ಇತ್ತೀಚಿನ ದಿನಗಳಲ್ಲಿ ರಾಜಕೀಯ ತಿಕ್ಕಾಟಕ್ಕೆ ಜಿಲ್ಲೆಯ ಜನರ ನೆಮ್ಮದಿ ಹಾಳಾಗುತ್ತಿದೆ. ಜನಾಂಗಗಳ ನಡುವಿನ ಸಾಮರಸ್ಯ ಕದಡಿದೆ. ಜಿಲ್ಲೆಯಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿದೆ, ನೆಮ್ಮದಿಯಿಂದ ಸಹಬಾಳ್ವೆ ನಡೆಸುತ್ತಿದ್ದ ಕೊಡಗು ಇದೀಗ ಬೂದಿಮುಚ್ಚಿದ ಕೆಂಡದಂತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ “ಕೈಲ್ ಪೊಳ್ದ್” ಸಮೀಪಿಸುತ್ತಿದ್ದು, ಕೊಡವ ಜನಾಂಗದ ಪಾಲಿಗೆ ಇದು ಪ್ರಮುಖ ಹಬ್ಬವಾಗಿದೆ ಮಾತ್ರವಲ್ಲ ಕೊಡಗು ಜಿಲ್ಲೆಯಲ್ಲಿ ನೆಲೆಕಂಡುಕೊಂಡಿರುವ ಬಹುತೇಕ ಎಲ್ಲಾ ಜಾತಿ ಜನಾಂಗ ಈ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಿದೆ., ಇದರ ಜೊತೆಜೊತೆಗೆ ಹಿಂದುಗಳ ಭಾವನಾತ್ಮಕ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ ಕೂಡಾ ಸಮೀಪಿಸುತ್ತಿದೆ. ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಕೊಡಗು ಚಲೋ ಕಾರ್ಯಕ್ರಮದ ಮೂಲಕ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾದರೆ, ಬಿಜೆಪಿ ಕೂಡಾ ಜನ ಜಾಗೃತಿ ಸಮಾವೇಶ ಮಾಡಲು ಹೊರಟಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ನೋಡಿದಾಗ ಕೊಡಗು ಜಿಲ್ಲೆ ಮತ್ತೊಮ್ಮೆ ಟಿಪ್ಪು ಜಯಂತಿಯ ಕರಾಳ ದಿನವನ್ನು ನೆನಪಿಸುತ್ತಿತ್ತು ಮಾತ್ರವಲ್ಲ ಅಪಾಯದ ಮುನ್ಸೂಚನೆ ಕಾಣುತ್ತಿತ್ತು. ಇದರ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲು ಒತ್ತಡ ಹೇರಲು ನಮ್ಮ ಸಂಸ್ಥೆ ಮುಂದಾಗಿತ್ತು ಎಂದು ಅವರುಗಳು ವಿವರಿಸಿದ್ದಾರೆ.
ಆದರೆ ಇದೀಗ ಜಿಲ್ಲಾಡಳಿತವೇ ಆ. 24ರಿಂದ 27ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಜಿಲ್ಲಾಡಳಿತದ ಈ ಕ್ರಮವನ್ನು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಜನರು ಈಗಾಗಲೇ ಕೊರೋನಾ ಮಹಾಮಾರಿಯ ಹೊಡೆತದಿಂದ ತತ್ತರಿಸಿ ಒಂದಷ್ಟು ಚೇತರಿಸಿಕೊಳ್ಳುತ್ತಿರುವಾಗ ಎರಡು ಪಕ್ಷಗಳು ತಮ್ಮ ರಾಜಕೀಯ ಬಲಾಬಲವನ್ನು ಪ್ರದರ್ಶಿಸುವ ಮೂಲಕ ಅನಾಹುತಕ್ಕೆ ಆಹ್ವಾನ ನೀಡಿದ್ದವೆಂದರೆ ತಪ್ಪಲ್ಲ. ಸ್ವಪ್ರತಿಷ್ಠೆಯ ದಳ್ಳುರಿಯಲ್ಲಿ ಕೊಡಗನ್ನು ಈ ರಾಜಕೀಯ ಪಕ್ಷಗಳು ಏನು ಮಾಡಲು ಹೊರಟಿವೆ ಎಂಬ ಪ್ರಶ್ನೆ ಕಾಡುತ್ತಿತ್ತಲ್ಲದೆ, ಆ.26ರಂದು ಏನಾದರೂ ಅನಾಹುತ ಸಂಭವಿಸಿ ಕಳೆದ ಬಾರಿಯ ಟಿಪ್ಪು ಜಯಂತಿಯಂತೆ ಕರ್ಫ್ಯೂ ಅಳವಡಿಸಿದ್ದರೆ ಹಬ್ಬದ ಮೇಲೆ ದುಷ್ಪರಿಣಾಮ ಬೀಳುವ ಎಂಬ ಭಯ ಎಲ್ಲರಲ್ಲೂ ಕಾಡುತ್ತಿತ್ತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!