ರಾಜ್ಯ ಸರಕಾರದಿಂದ ಬೆಳೆಗಾರರ ಹಿತ ಕಾಪಾಡುವ ಚಿಂತನೆ: ಗಿರೀಶ್ ಗಣಪತಿ

ಹೊಸ ದಿಗಂತ ವರದಿ, ಗೋಣಿಕೊಪ್ಪ:

ಪೈಸಾರಿ ಜಾಗದಲ್ಲಿ ಕಾಫಿ, ಕರಿಮೆಣಸು ಇನ್ನಿತರ ಬೆಳೆಗಳನ್ನು ಬೆಳೆದು ಒತ್ತುವರಿ ಮಾಡಿಕೊಂಡ ಜಾಗವನ್ನು 30 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ತೆಗೆದುಕೊಂಡ ನಿರ್ಧಾರ ಜಿಲ್ಲೆಯ ಬೆಳೆಗಾರರ ಹಿತ ಕಾಪಾಡುವ ಚಿಂತನೆಯಾಗಿದೆ ಎಂದು ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‍ ಗಣಪತಿ ಅಭಿಪ್ರಾಯಪಟ್ಟಿದ್ದಾರೆ.
ಪೊನ್ನಂಪೇಟೆ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರುಗಳ ಪ್ರಯತ್ನದಿಂದ ಈ ವ್ಯವಸ್ಥೆ ಕಾರ್ಯಗತಗೊಂಡಿದೆ. ಈ ವಿಚಾರದ ಬಗ್ಗೆ ಮೇ 12ರಂದು ಮಡಿಕೇರಿಯ ಕ್ರಿಸ್ಟಲ್ ಹಾಲ್‍ನಲ್ಲಿ ಬೆಳೆಗಾರರ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ. ಕಂದಾಯ ಸಚಿವ ಆರ್. ಆಶೋಕ್ ಅವರ ಉಪಸ್ಥಿತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಜಾಗ ನೀಡುವ ಬಗ್ಗೆ ಕೂಲಂಕಷವಾದ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಜಿಲ್ಲೆಯ ಪ್ರತಿಯೊಬ್ಬ ಬೆಳೆಗಾರನೂ ಸಭೆಯಲ್ಲಿ ಭಾಗವಹಿಸಿ ಬೆಳೆಗಾರರ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುವ ಪ್ರಯತ್ನ ನಡೆಸಬೇಕಾಗಿದೆ. ಜತೆಗೆ ಪೌತಿ ಖಾತೆ, ಆರ್.ಟಿ.ಸಿಯಲ್ಲಿನ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಅಂದು ಚರ್ಚೆ ನಡೆಸಿ ಸಚಿವರಿಂದ ನೇರವಾಗಿ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ಜಿಲ್ಲೆಯ ಶಾಸಕರು ಬೆಳೆಗಾರರಿಗೆ ಕಲ್ಪಿಸಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳುವಲ್ಲಿ ಬೆಳೆಗಾರರು ಮುಂದಾಗಬೇಕೆಂದು ತಿಳಿಸಿದರು.
ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಮಾತನಾಡಿ, ತಾಂತ್ರಿಕ ಸಮಸ್ಯೆಗಳಿಂದ ಹಲವು ವರ್ಷಗಳಿಂದ ಬೆಳೆಗಾರರು ಒತ್ತುವರಿ ಮಾಡಿಕೊಂಡ ಜಾಗ ಬೆಳೆಗಾರನ ಸುಪರ್ದಿಗೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರ ಕಂದಾಯ ಇಲಾಖೆಯ ಮೂಲಕ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಚಿಂತನೆ ಹರಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ತೀತಮಾಡ ಲಾಲಾ ಭೀಮಯ್ಯ, ದಿನೇಶ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!