ಸರ್ಕಾರಿ ಆಸ್ತಿಗಳಿಂದ ಹಿಂದೆ ಸರಿದ ಪ್ರತಿಭಟನಾಕಾರರು: ಇಲ್ಲಿದೆ ಲಂಕೆಯ ಪರಿಸ್ಥಿತಿಯ 7 ಅಂಶಗಳ ಅಪ್ಡೇಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಬಿಕ್ಕಟ್ಟಿನ ಉಲ್ಬಣದಿಂದ ಶ್ರೀಲಂಕಾದ ಪರಿಸ್ಥಿತಿ ಹದಗೆಡುತ್ತಿರುವುದರ ನಡುವೆಯೇ ಅಧ್ಯಕ್ಷ ಗೋಟಬಾಯಾ ರಾಜಪಕ್ಸೆ ರಾಜೀನಾಮೆ ನೀಡಲು ನಿರಾಕರಿಸಿ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿಸಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪ್ರತಿಭಟನಾಕಾರರನ್ನು ಹತ್ತಿಕ್ಕುವಂತೆ ವಿಕ್ರಮಸಿಂಘೇ ಆದೇಶಿಸಿದ್ದು ಕೋಲಂಬೋದಲ್ಲಿ 17 ಗಂಟೆಗಳ ವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ.

ಇನ್ನೊಂದೆಡೆ ಮಾಲ್ಡೀವ್ಸ್‌ ಗೆ ತೆರಳಿರುವ ಗೋಟಬಾಯಾ ಸದ್ಯ ಸಿಂಗಾಪುರಕ್ಕೆ ಹಾರಲು ಸಿದ್ಧತೆ ನಡೆಸಿದ್ದಾರೆ, ಅಲ್ಲಿಂದ ಅವರು ಸೌದಿ ಅರೇಬಿಯಾಗೆ ಹೋಗಲಿದ್ದಾರೆ ಎನ್ನಲಾಗಿದೆ. ಅಧ್ಯಕ್ಷರ ಕಛೇರಿ, ಪ್ರಧಾನಿ ನಿವಾಸ ಸೇರಿದಂತೆ ಸರ್ಕಾರಿ ಕಛೇರಿಗಳನ್ನು ವಶಪಡಿಸಿಕೊಂಡಿರುವ ಪ್ರತಿಭಟನಾಕಾರರು ಹಿಂದೆ ಸರಿಯುತ್ತಿದ್ದಾರೆ ಎಂದು ವರದಿಗಳಾಗಿದ್ದು ಈ ಕುರಿತ 7 ಅಂಶಗಳ ಅಪ್ಡೇಟ್‌ ಇಲ್ಲಿದೆ.

  • ವಿಕ್ರಮಸಿಂಘೆ ಅವರು ರಾಜಪಕ್ಸೆಯಿಂದ ಆಯ್ಕೆಯಾದ ಕಾರಣ ದೇಶದ ವ್ಯವಹಾರಗಳ ಚುಕ್ಕಾಣಿ ಹಿಡಿಯುವುದು ನಮಗೆ ಇಷ್ಟವಿಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಸೋಮವಾರ ರಾಜಪಕ್ಸೆ ರಾಜೀನಾಮೆ ನೀಡುವುದಾಗಿ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹೇಳಿದ್ದರು, ಆದರೆ ಗೋಟಬಾಯಾ ರಾಜೀನಾಮೆ ನೀಡಲು ನಿರಾಕರಿಸಿರಿದ್ದಾರೆ. ಶ್ರೀಲಂಕಾ ಸೈನ್ಯವು ಸಂಸತ್‌ ಭವನಕ್ಕೆ ಹೆಚ್ಚಿನ ಭದ್ರತೆ ನೀಡಿದ್ದು ಶಸ್ತ್ರ ಸಜ್ಜಿತ ಸೈನಿಕರನ್ನು ಮಾರ್ಗದೆಲ್ಲಡೆ ನಿಯೋಜಿಸಲಾಗಿದೆ.
  • ಈ ನಡುವೆ ಶ್ರೀಲಂಕಾದ ಯುಎಸ್ ರಾಯಭಾರಿ ಜೂಲಿ ಚುಂಗ್ ಬುಧವಾರ ಶಾಂತಿಯುತವಾಗಿ ಅಧಿಕಾರದ ವರ್ಗಾವಣೆಯನ್ನು ನಡೆಸಿ ಕಾನೂನಿನ ನಿಯಮವನ್ನು ಎತ್ತಿಹಿಡಿಯಲು ಶ್ರೀಲಂಕಾದ ರಾಜಕೀಯ ನಾಯಕರಿಗೆ ಕರೆ ನೀಡಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ದ್ವೀಪ ರಾಷ್ಟ್ರದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಆದರೆ ದೇಶದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ.
  • ಶ್ರೀಲಂಕಾದ ಪ್ರತಿಪಕ್ಷಗಳು ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಅವರ ಅಧಿಕಾರವನ್ನು ತಿರಸ್ಕರಿಸಿದ್ದು ಅವರ ನೇಮಕಾತಿಯನ್ನು ಕಾನೂನುಬಾಹಿರ ಎಂದು ಕರೆದಿವೆ. ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಸರ್ಕಾರದ ಇದುವರೆಗಿನ ಕ್ರಮಗಳನ್ನು “ಸಂಪೂರ್ಣ ಅರಾಜಕತೆ” ಎಂದು ಕರೆದಿದ್ದಾರೆ.
  • ಲಂಕಾ ಸೇನೆಯು ಪ್ರಧಾನಿ ಕಛೇರಿಯನ್ನು ಪ್ರತಿಭಟನಾಕಾರರಿಂದ ಪುನಃ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಪೋಲೀಸರ ದಾಳಿಯಲ್ಲಿ 26 ವರ್ಷದ ತರುಣನೊಬ್ಬ ಬಲಿಯಾಗಿದ್ದಾನೆ, 45 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು ಪ್ರತಿಭಟನಾಕಾರರು ಪ್ರಧಾನಿ ಕಚೇರಿಯನ್ನು ತೆರವು ಮಾಡಿ ಮತ್ತೆ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಹಾಗೂ ಅಧ್ಯಕ್ಷೀಯ ಭವನ ಇತ್ಯಾದಿ ಸರ್ಕಾರಿ ಕಛೇರಿಗಳಿಂದಲೂ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.
  • ಗೋಟಬಾಯಾ ಮಾಲ್ಡೀವ್ಸ್‌ ನಿಂದ ಸಿಂಗಾಪುರಕ್ಕೆ ತೆರಳಲಿದ್ದಾರೆ ಎನ್ನಲಾಗುತ್ತಿದ್ದು ಸಿಂಗಾಪುರದ ಮೂಲಕ ಅವರು ಸೌದಿ ಅರೇಬಿಯಾಗೆ ತೆರಳಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಅವರು ಸೌದಿ ಏರ್‌ಲೈನ್ಸ್ ವಿಮಾನವನ್ನು ಸಿಂಗಾಪುರಕ್ಕೆ ಮತ್ತು ನಂತರ ಸೌದಿ ಅರೇಬಿಯಾಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಮಾಲ್ಡೀವ್ಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
  • ಶ್ರೀಲಂಕಾದ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಅವರು ಗೋತಬಯ ರಾಜಪಕ್ಸೆ ಅವರು ಆದಷ್ಟು ಬೇಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಬೇಕು ಇಲ್ಲದಿದ್ದರೆ ಅವರನ್ನು ಕಚೇರಿಯಿಂದ ವಜಾಗೊಳಿಸಲು ಇತರ ಆಯ್ಕೆಗಳನ್ನು ಪರಿಗಣಿಸುವುದಾಗಿ ಗುರುವಾರ ತಿಳಿಸಿದ್ದಾರೆ ಎಂದು ಶ್ರೀಲಂಕಾ ಮಾಧ್ಯಮ ವರದಿ ಮಾಡಿದೆ.
  • ಶ್ರೀಲಂಕಾ ಸರ್ಕಾರವು ಕೊಲಂಬೊ ಜಿಲ್ಲೆಯಲ್ಲಿ ಜುಲೈ 14 ರಂದು ಮಧ್ಯಾಹ್ನ 12 ರಿಂದ ಜುಲೈ 15 ರ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ವಿಧಿಸಿರುವ ಕುರಿತು  ಸರ್ಕಾರದ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!