Friday, July 1, 2022

Latest Posts

ಪಿಎಸ್ಐ ನೇಮಕಾತಿ ಅಕ್ರಮ: ಆಡಿಯೋ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮವೆಂದ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು:
ಪಿಎಸ್ಐ ನೇಮಕಾತಿಯ ಯಾವುದೇ ಬ್ಯಾಚ್‌ ನಲ್ಲಿ ಅಕ್ರಮವಾಗಿದ್ದರೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಶಾಸಕ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ನಾನು ಕೇಳಿಲ್ಲ. ಯಾವ ಮೆಟೀರಿಯಲ್ ಇದ್ದರೂ ತನಿಖೆಯಾಗುತ್ತದೆ. ಇಬ್ಬರ ನಡುವೆ ಮಾತುಕತೆಯಾಗಿದೆ. ಅವರಿಬ್ಬರು ಯಾರು? ಅವರ ಅರ್ಹತೆ ಏನು? ವಿಶ್ವಾಸಾರ್ಹತೆ ಏನೆಂಬುದು ತನಿಖೆಯಲ್ಲಿ ತಿಳಿಯುತ್ತದೆ. ಆಡಿಯೋವನ್ನು ಸಹ ತನಿಖೆಗೆ ಒಳಪಡಿಸಿ ಯಾರೇ ತಪ್ಪಿತಸ್ಥರಿದ್ದರೂ ಯಾವುದೇ ಬ್ಯಾಚ್ ಆಗಿದ್ದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಶಾಲೆಗಳಿಗೆ ಬೆದರಿಕೆ ಇ-ಮೇಲ್ :
ಕಳೆದ 15 ದಿನಗಳ ಹಿಂದೆ ಶಾಲೆಗಳಿಗೆ ಬಂದಿದ್ದ ಬೆದರಿಕೆ ಇ- ಮೇಲ್ ಸಿರಿಯಾ ಹಾಗೂ ಪಾಕಿಸ್ತಾನದಿಂದ ಬಂದಿರುವ ಮಾಹಿತಿಯಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ಗೊತ್ತಿಲ್ಲ. ಪೊಲೀಸ್ ಆಯುಕ್ತರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಆಗಾಗ್ಗೆ ಶಾಂತಿ ಕದಡಲು ಈ ರೀತಿಯ ಪ್ರಯತ್ನಗಳಾಗುತ್ತವೆ. ಕಳೆದ ವರ್ಷವೂ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇ- ಮೇಲ್ ಮೂಲವನ್ನು ಪತ್ತೆ ಹಚ್ಚಲಾಗುವುದು. ಇಮೇಲ್ ಯಾವ ದೇಶದಿಂದ ಬಂದಿದೆ ಎಂದು ಗೊತ್ತಾಗುತ್ತದೆ. ಈ ಹಿಂದೆ ಕೆಲವು ಸಂದರ್ಭದಲ್ಲಿ ಆ ದೇಶದ ಅಧಿಕಾರಿಗಳಿಗೆ ತಿಳಿಸಿ, ಕೆಲವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss