ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಇಂದು (ಭಾನುವಾರ) ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬ್ಯಾಕ್ಟೀರಿಯಾ ಸೋಂಕು ಲೆಪ್ಟೊಸ್ಪೈರೋಸಿಸ್‌ನಿಂದ ಬಳಲುತ್ತಿದ್ದ 50 ವರ್ಷದ ಮಾನ್ ಅವರನ್ನು ಬುಧವಾರ ತಡರಾತ್ರಿ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಲೆಪ್ಟೊಸ್ಪೈರೋಸಿಸ್ ಒಂದು ಬ್ಯಾಕ್ಟೀರಿಯಾ ಸೋಂಕು ಆಗಿದ್ದು, ಇದು ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿತ ಪ್ರಾಣಿಗಳು ಅಥವಾ ಕಲುಷಿತ ವಾತಾವರಣದಿಂದ ಮನುಷ್ಯರು ಸೋಂಕಿಗೆ ಒಳಗಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಮಾನ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಭತ್ತ ಖರೀದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಅಧಿಕಾರಿಗಳ ಸಭೆ ಕರೆದಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.