ಹೊಸದಿಗಂತ ವರದಿ,ಮಂಗಳೂರು:
ದೇವಸ್ಥಾನ ವಠಾರದಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ಮಾಡಬಾರದು ಎಂದು ದೇವಸ್ಥಾನದ ಆಡಳಿತ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಯು.ಟಿ. ಖಾದರ್ ಅವರು, ಗಂಗೊಳ್ಳಿಯಲ್ಲಿ ಹಿಂದುಗಳಿಂದ ಮೀನು ಖರೀದಿಗೆ ಮುಸಲ್ಮಾನರು ಬಹಿಷ್ಕಾರ ಹಾಕಿದಾಗ ಎಲ್ಲಿ ಹೋಗಿದ್ದರು? ಖಂಡಿಸದೆ ಮೌನವಾಗಿದ್ದು ಯಾಕೆ? ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ತಿರುಗೇಟು ನೀಡಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ತಾನು ಮುಸ್ಲಿಂ ಪರ ಇರುವಂತೆ ತೋರಿಸಿಕೊಳ್ಳಲು ಹಿಂದು ಜಾತ್ರೆಗಳಲ್ಲಿ ಮುಸ್ಲಿಂರ ವ್ಯಾಪಾರಕ್ಕೆ ಅನುಮತಿಗಾಗಿ ಒತ್ತಾಯಿಸುತ್ತಿದೆ. ಪಕ್ಷದ ಮುಸ್ಲಿಂ ಓಲೈಕೆ ರಾಜಕಾರಣ ಗೊತ್ತಾಗುತ್ತಿದೆ ಎಂದು ಟೀಕಿಸಿರುವ ಅವರು, ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆಯನ್ನು ಹಾಕಿದಾಗ ಖಂಡಿಸಲಿಲ್ಲ. ಬಂದ್ ಮಾಡಿದ ಸಂದರ್ಭ ಮೆಡಿಕಲ್ ಶಾಪ್, ರೇಷನ್, ಶಿಕ್ಷಣ ಸಂಸ್ಥೆ , ಸಾರಿಗೆ ಸಹಿತ ತುರ್ತು ವ್ಯವಸ್ಥೆಗಳನ್ನು ಬಂದ್ ಮಾಡಿದಾಗ ಕಾಂಗ್ರೆಸ್ ಎಲ್ಲಿ ಹೋಗಿತ್ತು. ಕಾನೂನಿಗೆ ವಿರುದ್ದವಾಗಿ ನಡೆದ ಬಂದ್ ಹಿಂಪಡೆಯುವಂತೆ ಮನವೊಲಿಸಲು ವಿಫಲವಾಗಿದ್ದು, ನಿಮ್ಮ ಮಾತನ್ನೇ ಕೇಳುತ್ತಿಲ್ಲ ಎಂಬುದು ಗೊತ್ತಾಗಿದೆ.
ಸಿಎಎ ಕಾಯಿದೆ ವಿರೋಧ ಮಾಡುವ ಭರದಲ್ಲಿ ಪತಂಜಲಿ ವಸ್ತು ಖರೀದಿಗೆ ಬಹಿಷ್ಕಾರ, ಉತ್ತರ ಕರ್ನಾಟಕದಲ್ಲಿ ಹಿಂದುಗಳ ಬಳಿ ವ್ಯಾಪಾರ ಮಾಡಿದ್ದಕ್ಕಾಗಿ ಬೆದರಿಕೆ ಹಾಕಿದಾಗಲೂ ಇದನ್ನು ಸಮರ್ಥಿಸಿಕೊಂಡಂತೆ ಮೌನವಾಗಿದ್ದ ಕಾಂಗ್ರೆಸ್ ಇದೀಗ ತಾನೀಗ ಜಾತ್ಯಾತೀತ ಎಂದು ಬಿಂಬಿಸಲು ಹೊರಟಿದೆ ದೇಶದಲ್ಲಿ ಸ್ವತಃ ಕಾಂಗ್ರೆಸ್ ಪಕ್ಷದ ಎಡಬಿಡಂಗಿತನದಿಂದಲೇ ಮುಕ್ತವಾಗುತ್ತಿದೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.