ರಾಹುಲ್ ಗಾಂಧಿಯ ‘ಬಳ್ಳಾರಿ ಜೀನ್ಸ್’ ಕತೆಗೆ ಹೊಂದದ ಅಂಕಿಅಂಶ!

ಹೊಸ ದಿಗಂತ ಡಿಜಿಟಲ್ ಡೆಸ್ಕ್ :

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆಕ್ಸಫರ್ಡ್ ಸೇರಿದಂತೆ ನಾನಾ ವೇದಿಕೆಗಳಲ್ಲಿ ಅವರು ಮಾಡುತ್ತಿರುವ ಭಾಷಣ ಮತ್ತು ಸಂವಾದಗಳು ಹಲವು ಕಾರಣಗಳಿಂದ ಚರ್ಚೆಗೆ ಒಳಗಾಗುತ್ತಿವೆ. ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ನಿಂತು ಇಲ್ಲಿನ ಪ್ರಜಾಪ್ರಭುತ್ವಬದ್ಧ ಸರ್ಕಾರವನ್ನು ಕಿತ್ತೊಗೆಯುವುದಕ್ಕೆ ವಿದೇಶಿ ಶಕ್ತಿಗಳ ಸಹಾಯ ಕೇಳುತ್ತಿದ್ದಾರೆ ಎಂಬುದು ವಿವಾದವಾಗಿತ್ತು. ಇದೀಗ, ಇನ್ನೊಂದು ಸಂವಾದದಲ್ಲಿ ರಾಹುಲ್ ಗಾಂಧಿ ಕರ್ನಾಟಕದ ಬಳ್ಳಾರಿಯನ್ನು ಉಲ್ಲೇಖಿಸಿ ಆಡಿರುವ ಮಾತುಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆಗೆ ಒಳಗಾಗಿವೆ.

ಸಂವಾದದಲ್ಲಿ ರಾಹುಲ್ ಗಾಂಧಿ ಹೇಳಿದ್ದರ ಸಾರಾಂಶ- “ಬಳ್ಳಾರಿಯಲ್ಲಿ ಸುಮಾರು ಐದು ಲಕ್ಷ ಸ್ಥಳೀಯರಿಗೆ ಅಲ್ಲಿನ ಜೀನ್ಸ್ ವಸ್ತ್ರದ ಉದ್ದಿಮೆ ಕೆಲಸ ಕೊಟ್ಟಿತ್ತು. ಇದೀಗ ಅಲ್ಲಿನ ಸರ್ಕಾರದ ತಪ್ಪು ನೀತಿಗಳಿಂದ ಆ ಸಂಖ್ಯೆ 40 ಸಾವಿರಕ್ಕೆ ಕುಸಿದಿದೆ.”

ಇದೀಗ ಕರ್ನಾಟಕದ ಬಿಜೆಪಿ ಸೇರಿದಂತೆ ಹಲವರು ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಶ್ನಿಸುತ್ತಿರುವುದೇನೆಂದರೆ- ಇಡೀ ಬಳ್ಳಾರಿ ನಗರದ ಜನಸಂಖ್ಯೆಯೇ 5 ಲಕ್ಷಕ್ಕಿಂತ ತುಸು ಹೆಚ್ಚಿರುವಾಗ, ಐದು ಲಕ್ಷ ಮಂದಿ ಜೀನ್ಸ್ ಉದ್ದಿಮೆಯಲ್ಲಿ ಕೆಲಸ ಪಡೆದಿದ್ದರೆಂಬ ರಾಹುಲ್ ಗಾಂಧಿ ಮಾತಿಗೆ ಯಾವ ಆಧಾರವಿದೆ?
ಕರ್ನಾಟಕದ ಬಿಜೆಪಿ ಈ ಬಗ್ಗೆ ಟ್ವೀಟ್ ಮಾಡಿ ಹೀಗೆ ಹೇಳಿದೆ- ಕಳೆದ ಜನಗಣತಿಯಲ್ಲಿ 4.1 ಲಕ್ಷ ಜನರನ್ನು ಹೊಂದಿದ್ದ ನಗರದಲ್ಲಿ ಒಂದು ಉದ್ಯಮದಲ್ಲಿ 5 ಲಕ್ಷ ಉದ್ಯೋಗಿಗಳಾಗಿದ್ದೀರಾ? ಅಲ್ಲದೇ, 2016ರ ಸಮಯದಲ್ಲಿ ಬಳ್ಳಾರಿಯಲ್ಲಿ ನೀರಿಲ್ಲದೇ ಅಲ್ಲಿನ ಜೀನ್ಸ್ ಉದ್ದಿಮೆಯೇ ನೆಲಕಚ್ಚಿದ್ದಾಗ, ಆ ನಂತರ ಬಂದ ಬಿಜೆಪಿ ಸರ್ಕಾರವೇ ಅದನ್ನು ಸರಿ ಮಾಡಿತು ಎಂದು ಹೇಳುತ್ತ ಈ ಸಂಬಂಧ ಆಗಿನ ಮಾಧ್ಯಮ ವರದಿಯೊಂದನ್ನು ಲಗತ್ತಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಪಿಯೂಶ್ ಕುಲಶ್ರೇಷ್ಠ ಎಂಬುವವರು ತಮ್ಮ ಟ್ವೀಟಿನಲ್ಲಿ ಇನ್ನೊಂದು ತರ್ಕವನ್ನು ಎದುರಿಗಿರಿಸಿದ್ದಾರೆ. ಅವರು ಹೇಳಿರುವುದು- “ಷೇರು ಮಾರುಕಟ್ಟೆಯಲ್ಲಿರುವ 29 ಬೃಹತ್ ಕಂಪನಿಗಳ ಪೈಕಿ ಅಗ್ರಗಣ್ಯವಾಗಿರುವ ಟಾಟಾ ಸಮೂಹವೇ ನೀಡುತ್ತಿರುವ ಒಟ್ಟಾರೆ ಉದ್ಯೋಗ 9.35 ಲಕ್ಷ. ಹೀಗಿರುವಾಗ ಬಳ್ಳಾರಿ ಜೀನ್ಸ್ ಉದ್ದಿಮೆ 5 ಲಕ್ಷ ಮಂದಿಗೆ ಉದ್ಯೋಗ ನೀಡಿತ್ತೆಂಬ ವಾದ ಹೇಗೆ ಸಾಧುವಾಗುತ್ತದೆ? ಪ್ರತಿ ಉದ್ಯೋಗಿಗೆ 25 ಚದರ ಅಡಿ ಜಾಗ ನೀಡಿದರೂ ಜೀನ್ಸ್‌ ಕಾರ್ಖಾನೆ 287 ಎಕರೆಯಷ್ಟಾಗುತ್ತದೆ.” ಎನ್ನುವ ಮೂಲಕ ರಾಹುಲ್ ಗಾಂಧಿ ಹೇಳಿಕೆಯಲ್ಲಿರುವ ಉತ್ಪ್ರೇಕ್ಷೆಯನ್ನು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!