Friday, September 30, 2022

Latest Posts

ಇಂದಿನಿಂದ ರಾಹುಲ್ ಗಾಂಧಿ ‘ಭಾರತ್ ಜೋಡೋ ಯಾತ್ರೆ’: ಇವತ್ತಿನ ಶೆಡ್ಯೂಲ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ (ಬುಧವಾರ) ಇಂದಿನಿಂದ ಆರಂಭವಾಗಲಿದೆ. ಇಂದು ಸಂಜೆ 5 ಗಂಟೆಗೆ ಕನ್ಯಾಕುಮಾರಿಯಲ್ಲಿ ರಾಹುಲ್ ಗಾಂಧಿ ಅಧಿಕೃತವಾಗಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಪಾದಯಾತ್ರೆ ಕೈಗೊಂಡಿರುವುದು ಇದೇ ಮೊದಲು. ಈ ಯಾತ್ರೆಗೂ ಯಾವುದೇ ಚುನಾವಣೆಗೂ ಸಂಬಂಧವಿಲ್ಲ, ಭಾರತವನ್ನು ಒಗ್ಗೂಡಿಸುವುದು ಮಾತ್ರ ಈ ಯಾತ್ರೆಯ ಉದ್ದೇಶ ಎಂದು ಕಾಂಗ್ರೆಸ್ ಹೇಳಿದೆ. ಭಾರತ್ ಜೋಡೋ ಯಾತ್ರೆಯು 150 ದಿನಗಳ ಕಾಲ 12 ರಾಜ್ಯಗಳಲ್ಲಿ 3,570 ಕಿ.ಮೀ. ನಡೆಯಲಿದೆ.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ‘ಭಾರತ್ ಜೋಡೋ ಯಾತ್ರೆ’ ಆರಂಭಿಸುವ ಮುನ್ನ ರಾಹುಲ್ ಗಾಂಧಿ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಮಂಗಳವಾರ ರಾತ್ರಿ ರಾಹುಲ್ ತಮಿಳುನಾಡಿಗೆ ತಲುಪಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಚೆನ್ನೈ ಸಮೀಪದ ಶ್ರೀ ಪೆರಂಬದೂರಿನಲ್ಲಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ವಿವಿಧ ಧರ್ಮಗಳ ಪದ್ಧತಿಯಂತೆ ಕಾಂಗ್ರೆಸ್ ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ 3.05ಕ್ಕೆ ಪೀರವಲ್ಲೂರು ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3.25ಕ್ಕೆ ಕಾಮರಾಜ್ ಸ್ಮಾರಕಕ್ಕೆ ಭೇಟಿ ನೀಡಿ, 4.10ಕ್ಕೆ ಮಹಾತ್ಮ ಗಾಂಧಿ ಮಂಟಪದಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ಸಂಜೆ 4.40ಕ್ಕೆ ಭಾರತ್ ಜೋಡೋ ಯಾತ್ರಾರ್ಥಿಗಳೊಂದಿಗೆ ಮಹಾತ್ಮಗಾಂಧಿ ಮಂಟಪದಿಂದ ಬೀಚ್ ರಸ್ತೆವರೆಗೆ ನಡೆಯುವ ಜಾಥಾದಲ್ಲಿ ರಾಹುಲ್ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಕನ್ಯಾಕುಮಾರಿ ತಲುಪುವ ಮೂಲಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಅಲ್ಲಿ ನಡೆಯುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಮತ್ತು ಅವರ ಜೊತೆಗಿರುವ ಯಾತ್ರಿಕರು ರಾತ್ರಿ ವೇಳೆ ಕಂಟೈನರ್‌ಗಳಲ್ಲಿ  ತಂಗಲಿದ್ದಾರೆ. ಇದಕ್ಕಾಗಿ ಒಟ್ಟು 60 ಕಂಟೈನರ್ ವ್ಯವಸ್ಥೆ ಮಾಡಲಾಗಿದ್ದು, ಅದರಲ್ಲಿ ಮಲಗುವ ಹಾಸಿಗೆಗಳು, ಶೌಚಾಲಯ ಮತ್ತು ಎಸಿಗಳನ್ನು ಸಹ ಅಳವಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!