Thursday, August 11, 2022

Latest Posts

ವನ್ಯಪ್ರಾಣಿ ನುಸುಳು ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ: ಎಂಎಲ್ಸಿ ಸುಜಾಕುಶಾಲಪ್ಪ ಅವರೊಂದಿಗೆ ಸಮಾಲೋಚನೆ

ಹೊಸದಿಗಂತ ವರದಿ,ಶ್ರೀಮಂಗಲ:

ದಕ್ಷಿಣ ಕೊಡಗಿನ ಗ್ರಾಮಗಳಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ‌ ವನ್ಯಪ್ರಾಣಿಗಳ ನುಸುಳು‌ವಿಕೆಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಿಧಾನ‌ಪರಿಷತ್ ಸದಸ್ಯ ಮಂಡೇಪಂಡ‌ ಸುಜಾ ಕುಶಾಲಪ್ಪ ತಿಳಿಸಿದರು.
ತಿತಿಮತಿ ಸಮೀಪದ ಚೀನಿಹಡ್ಲುವಿನಲ್ಲಿ ಅರಣ್ಯದ ಸರಹದ್ದು ಮೂಲಕ ಮುಂದುವರೆದ 3.3 ಕಿ.ಮೀಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಸಂಬಂಧ ಪರಿಶೀಲನೆ ನಡೆಸಿ ಬೆಳೆಗಾರರು, ಹಾಡಿ ನಿವಾಸಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.
ಈ ಸಂದರ್ಭ ಬೆಳೆಗಾರರ ಪ್ರಮುಖರು ಮಾತನಾಡಿ, ದ.ಕೊಡಗಿನ ತಿತಿಮತಿ, ಕೋಣನಕಟ್ಟೆ, ಸುಳುಗೋಡು, ಮಾಯಮುಡಿ, ಬಾಳಾಜಿ ಸೇರಿದಂತೆ ಇತರ ಭಾಗಗಳಿಗೆ ಚೀನಿಹಡ್ಲುವಿನ ಮೂಲಕ ಕಾಡಾನೆಗಳು ನುಸುಳುತ್ತಿವೆ. ಈಗಾಗಲೇ ತಿತಿಮತಿ ಚೌಡಿಕಟ್ಟೆಯಿಂದ ಚೀನಿಹಡ್ಲುವಿನವರೆಗೆ 9 ಕಿ.ಮೀ ವ್ಯಾಪ್ತಿಯ ಅರಣ್ಯ ಸರಹದ್ದಿನಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣವಾಗಿದೆ. ಉಳಿದ 3.3 ಕಿ.ಮೀಗೆ ಸುಮಾರು ರೂ.4.5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಕಾಮಗಾರಿಯನ್ನು ಮಾರ್ಚ್ ತಿಂಗಳವರೆಗೆ ಮಾಡದಿದ್ದರೆ ಅನುದಾನ ವಾಪಾಸ್ಸು ಹೋಗಲಿದೆ. ವನ್ಯಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಬೆಳೆಹಾನಿ, ಪ್ರಾಣ ಹಾನಿಗಳಂತಹ ಗಂಭೀರ ಸಮಸ್ಯೆ ಮುಂದುವರೆಯಲಿದೆ ಎಂದು ಅತಂಕ ವ್ಯಕ್ತಪಡಿಸಿದರು.
ಸರ್ಕಾರದಿಂದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮಂಜೂರಾಗಿರುವ ದೊಡ್ಡ ಪ್ರಮಾಣದ ಅನುದಾನವನ್ನು ವಿನಿಯೋಗಿಸಿಕೊಳ್ಳಲು ಉಂಟಾಗಿರುವ ಅಡೆತಡೆಯನ್ನು ನಿವಾರಿಸಿ, ಬೆಳೆಗಾರರಿಗೆ ಮತ್ತು ಹಾಡಿ ನಿವಾಸಿಗಳಿಗೆ ಅನುಕೂಲವಾಗುವಂತೆ ಕಾಮಗಾರಿ ಮುಂದುವರೆಸುವಂತೆ ಒತ್ತಾಯಿಸಿದರು. 2019ರಲ್ಲಿ ಈ ಯೋಜನೆಗೆ ಅನುದಾನ ಮಂಜೂರಾಗಿ ಕಾಮಗಾರಿ ಸ್ಥಗಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭ ಹಾಡಿ ನಿವಾಸಿಗಳ ಪರ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಪಂಕಜಾ, ತಿತಿಮತಿ ಗ್ರಾ.ಪಂ.ಅಧ್ಯಕ್ಷೆ ಆಶಾ, ಸದಸ್ಯೆ ವಿಜಯಾ ಅವರುಗಳು, ಅರಣ್ಯದ ಒಳಗೆ ಸುಮಾರು 100 ಹಾಡಿಗಳಿದ್ದು, ಇಲ್ಲಿ ತೋಟ, ಗದ್ದೆಗಳೂ ಇವೆ. ಹಾಡಿಗಳನ್ನು ಸೇರಿಸಿ ಬ್ಯಾರಿಕೇಡ್ ಹಾಕುವ ಬದಲು ಹಾಡಿಯ ಸುತ್ತ ಬ್ಯಾರಿಕೇಡ್ ಅಳವಡಿಸುವಂತೆ ಯೋಜನೆ ಬದಲಾಯಿಸಬೇಕು. ಹಾಡಿಯ ಸುತ್ತ ಸೋಲಾರ್ ಬೇಲಿ ಮತ್ತು ಕಂದಕ ನಿರ್ಮಾಣ ಮಾಡಿದರೆ ಸಾಲದು. ಇಲ್ಲಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ತಿತಿಮತಿ ವನ್ಯಜೀವಿ ವಿಭಾಗದ ಎ.ಸಿ.ಎಫ್. ಸತೀಶ್ ಅವರು ಮಾತನಾಡಿ,. ಈ ಸ್ಥಳದಿಂದಲೇ ದ.ಕೊಡಗಿನ ಹಲವು ಭಾಗಕ್ಕೆ ಕಾಡಾನೆಗಳು ಹೆಚ್ಚಾಗಿ ನುಸುಳುತ್ತಿರುವುದನ್ನು ಗುರುತಿಸಲಾಗಿದೆ. ಆದ್ದರಿಂದ
ಅರಣ್ಯದ ಸರಹದ್ದಿನಲ್ಲಿ ಬ್ಯಾರಿಕೇಡ್ ಹಾಕಲು ಯೋಜನೆ ಮಂಜೂರಾಗಿದೆ. ಇದನ್ನು ಹಾಡಿಯ ಸುತ್ತ ಮಾಡಲು ಸಾಧ್ಯವಿಲ್ಲ. ಹಾಡಿನಿವಾಸಿಗಳ ಸುರಕ್ಷತೆಗೆ ಮತ್ತು ಇಲ್ಲಿನ ಅರಣ್ಯವಾಸಿಗಳ ಬೆಳೆ ರಕ್ಷಣೆಗೆ ಈಗಾಗಲೇ ಕಂದಕವನ್ನು ನಿರ್ಮಿಸಲಾಗಿದ್ದು, ಕಂದಕವನ್ನು ದುರಸ್ತಿಗೊಳಿಸಿ ಸೋಲಾರ್ ಬೇಲಿ ನಿರ್ಮಿಸಿಕೊಡುವುದಾಗಿಯೂ ಹಾಗೂ ಇಲ್ಲಿನ ಹಾಡಿಯಲ್ಲಿರುವ ಅರಣ್ಯವಾಸಿಗಳಿಗೆ ಕಾನೂನು ಬದ್ಧ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಮುಂದುವರೆಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಸುಜಾ ಕುಶಾಲಪ್ಪ ಅವರು, ದಿನನಿತ್ಯ ವನ್ಯ ಪ್ರಾಣಿ – ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಬೆಳೆ ನಷ್ಟದೊಂದಿಗೆ ಅಮಾಯಕರ ಜೀವ ಹಾನಿ ಹೆಚ್ಚಾಗುತ್ತಿದೆ. ಇದರಿಂದ ಕಾರ್ಮಿಕರು ಹಾಗೂ ಬೆಳೆಗಾರರು ಸಂಕಷ್ಟ ಪಡುವಂತಾಗಿದೆ. ವನ್ಯ ಪ್ರಾಣಿಗಳ ಹಾವಳಿ ತಡೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಅನುದಾನವನ್ನು ವಿನಿಯೋಗಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದರೊಂದಿಗೆ ಹಾಡಿ ನಿವಾಸಿಗಳ ಸಮಸ್ಯೆಗೆ ಪ್ರತ್ಯೇಕ ಯೋಜನೆ ರೂಪಿಸಿ ಸಮಸ್ಯೆ ನಿವಾರಿಸಬೇಕಾಗಿದೆ ಎಂದು ಹೇಳಿದರು.
ತಿತಿಮತಿಯ ಚೌಡಿಕಟ್ಟೆಯಿಂದ ಚೀನಿಹಡ್ಲು ಮೂಲಕ ಕೆ.ಎಂ.ಕೊಲ್ಲಿಯವರೆಗೆ ವನ್ಯಪ್ರಾಣಿಗಳು ಗ್ರಾಮಕ್ಕೆ ನುಸುಳುವ ಮುಖ್ಯ ಜಾಗವಾಗಿದ್ದು, ಇದನ್ನು ತಡೆಗಟ್ಟಲು ಉಳಿದ 3.3ಕಿ.ಮೀ ಕಾಮಗಾರಿ ಮುಂದುವರೆಸಲು ಹಾಡಿ ನಿವಾಸಿಗಳು ತಡೆ ಮಾಡುತ್ತಿರುವುದರಿಂದ ಜನಪ್ರತಿನಿಧಿಗಳು, ಗ್ರ್ರಾಮಸ್ಥರು, ಅರಣ್ಯ ಇಲಾಖಾ ಅಧಿಕಾರಿಗಳು, ಹಾಡಿ ನಿವಾಸಿಗಳು ಮತ್ತು ಬೆಳೆಗಾರರ ಪ್ರತಿನಿಧಿಗಳ ಸಭೆ ಕರೆದು ಬಗೆಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಕೊಡಗು ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶರಿ ಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಕೊಲ್ಲೀರ ಧರ್ಮಜ ಉತ್ತಪ್ಪ, ಚೆಪ್ಪುಡಿರ ಮಾಚಯ್ಯ, ಕೊಡಗು ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್‍ ಬೋಪಯ್ಯ, ಕೊಡಗು ವನ್ಯಜೀವಿ ಸಂಘದ ಕರ್ನಲ್ ಸಿ.ಪಿ. ಮುತ್ತಣ್ಣ, ತಿತಿಮತಿ ದೇವರಪುರ ಗ್ರೀನ್ ವಿಲೇಜ್ ಕಮ್ಯೂನಿಟಿ ಫೋರಂ ಪದಾಧಿಕಾರಿಗಳು, ಪಿ.ಡಿ.ಓ ಮಮತಾ, ಅರಣ್ಯ ಇಲಾಖಾ ಅಧಿಕಾರಿಗಳಾದ ಎ.ಸಿ.ಎಫ್ ಪಂದ್ಯಂಡ ಉತ್ತಪ್ಪ, ತಿತಿಮತಿ ಆರ್.ಎಫ್.ಓ. ಅಶೋಕ್, ಅನೆಚೌಕೂರು ಆರ್.ಎಫ್.ಓ. ಕಿರಣ್‍ಕುಮಾರ್, ಗೋಣಿಕೊಪ್ಪಲು ಉಪನಿರೀಕ್ಷಕ ಹೆಚ್.ಸುಬ್ಬಯ್ಯ, ಸೇರಿದಂತೆ ಕೋಣನಕಟ್ಟೆ, ಸುಳುಗೋಡು, ಮಾಯಮುಡಿ, ತಿತಿಮತಿ, ದೇವರಪುರ, ಬಾಳಾಜಿ, ಅತ್ತೂರು, ಕೈಕೇರಿ, ಇತರ ಭಾಗದ ಬೆಳೆಗಾರರು ಹಾಗೂ ಚೀನಿಹಡ್ಲುವಿನ ಅರಣ್ಯವಾಸಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss